ಸರ್ಕಾರವು ತಾಲ್ಲೂಕಿಗೊಂದ ರಂಗಮಂದಿರ ನಿರ್ಮಿಸಿ ನಾಟಕಗಳನ್ನು ಬೆಳೆಸಬೇಕು
ಮೂಡಲಗಿ: ರಂಗಭೂಮಿಯನ್ನು ಜನಸಾಮಾನ್ಯರ ಹತ್ತಿರ ಒಯ್ಯಲು ಸರ್ಕಾರವು ತಾಲ್ಲೂಕಿಗೊಂದು ರಂಗಮಂದಿರಗಳನ್ನು ನಿರ್ಮಿಸಿ, ರಂಗ ಕಲೆಯನ್ನು ಬೆಳೆಸಬೇಕು’ ಎಂದು ರಂಗಕಲಾವಿದ, ಝೀ ಟಿವಿಯ ಕಾಮಿಡಿ ಕಿಲಾಡಿ ಸ್ಪರ್ಧೆಯ ವಿಜೇತ ಹರೀಶ ಹಿರಿಯೂರ ಹೇಳಿದರು.
ಇಲ್ಲಿಯ ಕರ್ನಾಟಕ ರಾಜ್ಯ ಕಾರ್ಯನಿರತ ಪತ್ರಕರ್ತರ ಸಂಘ ಮೂಡಲಗಿ ಘಟಕದ ಪದಾಧಿಕಾರಿಗಳು ನೀಡಿದ ಸನ್ಮಾನವನ್ನು ಸ್ವೀಕರಿಸಿ ಮಾತನಾಡಿದ ಅವರು ಮಹಾರಾಷ್ಟ್ರ ಮಾದರಿಯಲ್ಲಿ ಕರ್ನಾಟಕದಲ್ಲಿಯೂ ರಂಗಭೂಮಿಗೆ ಪ್ರೋತ್ಸಾಹ ದೊರೆಯಬೇಕಾಗಿದೆ ಎಂದರು.
ನಾಟಕ ನೋಡುವ ಪ್ರೇಕ್ಷಕರು, ಕಲಾಪ್ರೇಮಿಗಳು ಇರುವವರೆಗೆ ನಾಟಕ ಕಲಾವಿದರು ಬದುಕಿರುತ್ತಾರೆ, ರಂಗಭೂಮಿಯ ಉಳಿಯುತ್ತದೆ. ಇಂದಿನ ಟಿವಿ, ಮೊಬೈಲ್ ವ್ಯಾಮೋಹದಲ್ಲಿ ನಾಟಕಗಳನ್ನು ನೋಡುವವರ ಸಂಖ್ಯೆ ಕ್ಷೀಣಿಸುತ್ತಲಿದೆ. ರಂಗಭೂಮಿ ಉಳಿಯಬೇಕಾದರೆ ಜನರು ನಾಟಕಗಳ ಬಗ್ಗೆ ಒಲವು ತೋರಬೇಕು ಎಂದರು.
ನಾಟಕ ಪ್ರಾರಂಭಿಸಲು ವಿವಿಧ ಇಲಾಖೆಗಳಿಂದ ಅನುಮತಿಯನ್ನು ಪಡೆಯಬೇಕು, ಅದಕ್ಕಾಗಿ ಕನಿಷ್ಠ ಒಂದು ತಿಂಗಳಾದರೂ ಬೇಕಾಗುವುದು. ಆಯಾ ಊರುಗಳಲ್ಲಿ ನಾಟಕ ಪ್ರಾರಂಭಿಸಲು ನಾಟಕ ಕಂಪನಿಗಳಿಗೆ ಏಕಗವಾಕ್ಷಿಯ ಪದ್ದತಿಯಲ್ಲಿ ಅನುಮತಿ ನೀಡುವ ಮೂಲಕ ಕರ್ನಾಟಕ ರಾಜ್ಯದಲ್ಲಿ ನಾಟಕ ಕಂಪನಿಗಳಿಗೆ ಅನುಕೂಲ ಮಾಡಿಕೊಡಬೇಕು ಎಂದರು.
ಉತ್ತರ ಕರ್ನಾಟಕದಲ್ಲಿ ಅನೇಕ ಉತ್ತಮ ಕಲಾವಿದರು ಇದ್ದು, ಶ್ರದ್ಧೆ, ಪರಿಶ್ರಮ, ಪ್ರಯತ್ನವಿದ್ದರೆ ಟಿವಿ ರಿಯಾಲಟಿ ಕಾರ್ಯಕ್ರಮ ಮತ್ತು ಸಿನಿಮಾಗಳಲ್ಲಿ ಸಹ ಕಂಡಿತ ಅವಕಾಶಗಳು ದೊರೆಯುತ್ತವೆ. ಇದಕ್ಕೆ ತಾವೇ ಉತ್ತಮ ಉಧಾಹರಣೆ ಎಂದರು.
ವಿಶ್ವರಾದ್ಯ ನಾಟ್ಯ ಸಂಘದ ವ್ಯವಸ್ಥಾಪಕರಾದ ರಾಮಶೆಟ್ಟಿ ಕೊಡ್ಲಿ ಮಾತನಾಡಿ ಕಷ್ಟ, ನಷ್ಟಗಳನ್ನು ಎದುರಿಸಿ ನಾಟಕ ಕಂಪನಿಗಳನ್ನು ನಡೆಸಬೇಕಾಗಿದೆ. ಕೋವಿಡ್, ಪ್ರವಾಹ ಮತ್ತು ಅತೀವೃಷ್ಟಿಯಂತ ಸಂದರ್ಭದಲ್ಲಿ ಕಂಪನಿ ನಾಟಕಗಳು ಸಾಕಷ್ಟು ನಷ್ಟ ಅನುಭವಿಸುತ್ತಿದ್ದು, ಸರ್ಕಾರವು ಇಂಥ ಪರಿಸ್ಥಿತಿಗಳನ್ನು ತಿಳಿದು ಪರಿಹಾರ ನೀಡುವಂತ ಕೆಲಸ ಮಾಡಬೇಕು ಎಂದರು.
ಕಲಾವಿದರಾದ ಹರೀಶ ಹಾಗೂ ಪ್ರಿಯದರ್ಶಿನಿ ಹಿರಿಯೂರ ದಂಪತಿಗಳನ್ನು ಪತ್ರಕರ್ತರು ಸನ್ಮಾಸಿದರು.
ಹಿರಿಯ ಪತ್ರಕರ್ತ, ಸಾಹಿತಿ ಬಾಲಶೇಖರ ಬಂದಿ ಪ್ರಾಸ್ತಾವಿಕ ಮಾತನಾಡಿದರು.
ಸಂಘದ ಅಧ್ಯಕ್ಷ ಕೃಷ್ಣಾ ಗಿರೆಣ್ಣವರ ಅಧ್ಯಕ್ಷತೆವಹಿಸಿದ್ದರು.
ಸಂಘದ ಉಪಾಧ್ಯಕ್ಷ ಎಲ್.ಸಿ. ಗಾಡವಿ, ಪ್ರಧಾನ ಕಾರ್ಯದರ್ಶಿ ಮಲ್ಲಿಕಾರ್ಜುನ ಬೋಳನ್ನವರ, ಅಲ್ತಾಫ ಹವಾಲ್ದಾರ್, ಮಹಾದೇವ ನಡುವಿನಕೇರಿ, ಸುರೇಶ ಪಾಟೀಲ, ಹನಮಂತ ಸತರಡ್ಡಿ, ಈಶ್ವರ ಢವಳೇಶ್ವರ, ಶಿವಬಸು ಗಾಡವಿ, ಭೀಮಶಿ ತಳವಾರ, ಕಲ್ಲಪ್ಪ ಮೀಶಿ, ಅಶೋಕ ಸಿದ್ಲಿಂಗಪ್ಪಗೋಳ, ಯಲ್ಲಪ್ಪ ಸಣ್ಣಕ್ಕಿ, ಲಕ್ಷ್ಮಣ ಮೆಳ್ಳಿಗೇರಿ.