ಮೂಡಲಗಿ: ಮಕ್ಕಳ ಸಮಗ್ರವಾದ ಬೆಳವಣಿಗೆಯಲ್ಲಿ ಪ್ರಮುಖವಾಗಿ ಕೌಶಲ್ಯಗಳು ಮತ್ತು ಮೌಲ್ಯಗಳು ನಿರ್ಣಾಯಕ ಪಾತ್ರವಹಿಸುತ್ತವೆ. ಶಾಲಾ ಹಂತದಲ್ಲಿಯೇ ಶೈಕ್ಷಣಿಕ ಚಟುವಟಿಕೆಗಳ ಜೊತೆಯಲ್ಲಿ ಮೈಗೂಡಿಸಿದಾಗ ಮಾತ್ರ ಭವಿಷ್ಯತ್ತಿನಲ್ಲಿ ಉತ್ತಮ ಪ್ರಜೆಗಳನ್ನಾಗಿ ರೂಪಿಸಲು ಸಾಧ್ಯ ಎಂದು ಶಿಕ್ಷಕರ ಸಂಘದ ನಿರ್ದೇಶಕ ಕೆ.ಎಲ್ ಮೀಶಿ ವಿವರಿಸಿದರು.
ಅವರು ಶನಿವಾರ ಸಮೀಪದ ಪಟಗುಂದಿ ಗ್ರಾಮದ ಸರಕಾರಿ ಹಿರಿಯ ಕನ್ನಡ ಮತ್ತು ಉರ್ದು ಶಾಲೆಯಲ್ಲಿ ಜರುಗಿದ ಸಂಭ್ರಮ ಶನಿವಾರ – ಬ್ಯಾಗ ರಹಿತ ದಿನದ ಪ್ರಯುಕ್ತ ಮಾತನಾಡಿ, ಪ್ರತಿ ತಿಂಗಳು ಮೂರನೇ ಶನಿವಾರ ಮಕ್ಕಳಿಗೆ ಪುಸ್ತಕ, ನೋಟ್ ಬುಕ್, ಬ್ಯಾಗ್ ಇಲ್ಲದೆ ಶಾಲೆಗೆ ಬರಬೇಕು. ಸಂತಸದ ಕಲಿಕೆಯನ್ನುಂಟುಮಾಡಲು ಚಟುವಟಿಕೆ ಆಧಾರಿತ ಕಲಿಕೆಯನ್ನು ಪ್ರೋತ್ಸಾಹಿಸಲು ಆರೋಗ್ಯಕರ ಜೀವನ ಶೈಲಿ, ಶುಚಿತ್ವ, ನಾಗರಿಕ ಸೌಲಭ್ಯಗಳು ಹಾಗೂ ಹಲವಾರು ವಿಷಯಗಳ ಅರಿವು ಮೂಡಿಸುವದಾಗಿದೆ. ಮಕ್ಕಳಿಗೆ ವಿನೂತನ ಮಾರ್ಗದರ್ಶನ ಹಾಗೂ ಸ್ವ-ಕಲಿಕೆಗೆ ಸಹಾಯಕವಾಗುವದು ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಪಠ್ಯೇತರ ಚಟುವಟಿಕೆಗಳನ್ನು ಆಯೋಜಿಸಿದ್ದರು. ಸಾರ್ವಜನಿಕ ಸೌಕರ್ಯಗಳಾದ ಗ್ರಾಮ ಪಂಚಾಯತ್, ಶುದ್ಧ ಕುಡಿಯುವ ನೀರಿನ ಘಟಕ, ಬಸ್ ತಂಗುದಾನ, ಅಂಚೆ ಕಛೇರಿ, ತ್ಯಾಜ್ಯ ವಿಲೇವಾರಿ ವಾಹನ ಹಾಗೂ ಇನ್ನಿತರ ನಾಗರಿಕ ಸೌಲಭ್ಯಗಳನ್ನು ಪ್ರತ್ಯಕ್ಷವಾಗಿ ವೀಕ್ಷಿಸಿ ಅದರಿಂದಾಗುವ ಪ್ರಯೋಜನಗಳ ಕುರಿತು ಮಕ್ಕಳು ಅರಿತುಕೊಂಡರು.
ಸಂಭ್ರಮ ಕಾರ್ಯಕ್ರಮದಲ್ಲಿ ಪ್ರಧಾನ ಗುರುಗಳಾದ ರಾಜೀವ ಕೊಳದೂರ, ಎಮ್.ಎನ್ ಪೆಂಡಾರಿ, ಸಹ ಶಿಕ್ಷಕರಾದ ಎ.ಎ ಪಟವೇಗಾರ, ಎಸ್.ಐ ನದಾಫ್, ಶಿವರಾಜ ಕಾಂಬಳೆ, ಮಹಾಂತೇಶ ಭಜಂತ್ರಿ, ಲಕ್ಷ್ಮಿ ಕೆಳಗೇರಿ, ಜಯಶ್ರೀ ಸರ್ವಿ ಹಾಗೂ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.
