ಮೂಡಲಗಿ: ಪಟ್ಟಣದ ತಾಪಂ ಕಾರ್ಯಾಲಯದ ಎದುರು ಗುರುವಾರ ಕರ್ನಾಟಕ ರಾಜ್ಯ ಮಹಾತ್ಮ ಗಾಂಧಿ ನರೇಗಾ ನೌಕರರ ಕ್ಷೇಮಾಭಿವೃದ್ಧಿ ಸಂಘದ ನೇತೃತ್ವದಲ್ಲಿ 6 ತಿಂಗಳ ಬಾಕಿ ವೇತನ ಪಾವತಿ, ಸೇವಾ ಭದ್ರತೆ, ಆರೋಗ್ಯ ವಿಮೆ ಸೌಲಭ್ಯ ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಅಸಹಕಾರ ಪ್ರತಿಭಟನೆ ನಡೆಸಿದರು.
ಆರು ತಿಂಗಳಿಂದ ನರೇಗಾ ನೌಕರರಿಗೆ ವೇತನ ನೀಡಿಲ್ಲ. ಇದರಿಂದಾಗಿ ಮನೆಯ ನಿರ್ವಹಣೆ ಮಾಡಲು ಸಾಧ್ಯವಾಗುತ್ತಿಲ್ಲ. ಎರಡು ತಿಂಗಳಿಂದ ವೇತನ ಪಾವತಿಸುವ ಭರವಸೆ ಮಾತ್ರ ನೀಡಿದ್ದಾರೆ. ಆದರೆ ಇದುವರೆಗೆ ವೇತನ ಪಾವತಿಸಿಲ್ಲ. ಜತೆಗೆ ನೌಕರರ ಕುಟುಂಬಕ್ಕೆ ಆರೋಗ್ಯ ವಿಮೆಯ ಸೌಲಭ್ಯ ನೀಡುವ ಭರವಸೆಯೂ ನೀಡಿದ್ದಾರೆ. ಅದು ಕೂಡ ಈಡೇರಿಲ್ಲ. ದಶಕಗಳಿಂದ ಸೇವೆ ಸಲ್ಲಿಸುತ್ತಿರುವ ನೌಕರರಿಗೆ ಸೇವಾ ಭದ್ರತೆಯೂ ಇಲ್ಲದಂತಾಗಿದೆ. ಆದ್ದರಿಂದ ಕೂಡಲೇ ನರೇಗಾ ನೌಕರರ ಎಲ್ಲ ಬೇಡಿಕೆಗಳನ್ನು ಈಡೇರಿಸಬೇಕು ಎಂದು ಪ್ರತಿಭಟನೆ ಮೂಲಕ ಒತ್ತಾಯಿಸಿದರು.
ಈ ಸಂದರ್ಭದಲ್ಲಿ ತಾ.ಪಂ ತಾಂತ್ರಿಕ ಸಂಯೋಜಕ ನಾರ್ಗಾಜುನ ಇಳಿಗೇರ, ಎಂಐಎಸ್ ಸಂಯೋಜಕ ನಿರಂಜನ ಮಲ್ಲವ್ವಗೋಳ , ಐಇಸಿ ಸಂಯೋಜಕರು, ಆಡಳಿತ ಸಹಾಯಕ ಸರೋಜಾ ಸಂಕೋನಟ್ಟಿ, ತಾಂತ್ರಿಕ ಸಂಯೋಜಕರಾದ ವಿಠ್ಠಲ ಬೋರನ್ನವರ, ಸುಪ್ರಿತ್ ಪಾಟೀಲ, ಗುರು ಹಿರೇಮಠ, ಕಾಡೇಶ ಖೋತ, ವಿನಾಯಕ ಸುಬಾಜಿ, ಬಿಎಫ್ ಟಿಗಳಾದ ಲಖಪ್ಪಾ ಸೊಂಟನ್ನವರ, ಅಶೋಕ ದೊಡ್ಡಮನಿ, ಜುಬೇರ ನಾಗಬಾಚೆ, ಬಸವರಾಜ ಇಟ್ನಾಳ ಹಾಗೂ ಗ್ರಾಮ ಕಾಯಕ ಮಿತ್ರರು ಉಪಸ್ಥಿತರಿದ್ದರು.