ಮಸಗುಪ್ಪಿ- ಹಿಂದುಳಿದ ಉಪ್ಪಾರ ಸಮಾಜದ ಅಭಿವೃದ್ಧಿಗೆ ಬದ್ಧನಿರುವೆ. ಬೆಮುಲ್ ನಲ್ಲಿ ಎರಡು ಸ್ಥಾನಗಳಿಗೆ ನಿರ್ದೇಶಕರನ್ನು ನೇಮಕ ಮಾಡಲಾಗುತ್ತಿದ್ದು, ಅದರಲ್ಲಿ ಒಂದನ್ನು ಮೂಡಲಗಿ- ಗೋಕಾಕ ತಾಲ್ಲೂಕಿಗೆ ಸೇರಿರುವ ಭಗೀರಥ- ಉಪ್ಪಾರ ಸಮಾಜಕ್ಕೆ ಸೇರಿರುವ ರೈತಪರ ಕಾಳಜಿಯುಳ್ಳ ವ್ಯಕ್ತಿಯೊಬ್ಬರನ್ನು ನಿರ್ದೇಶಕನನ್ನಾಗಿ ಮಾಡಿಕೊಳ್ಳುತ್ತೇನೆ ಎಂದು ಶಾಸಕ ಹಾಗೂ ಬೆಮುಲ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿಯವರು ಭರವಸೆಯನ್ನು ನೀಡಿದರು.
ಮೂಡಲಗಿ ತಾಲ್ಲೂಕಿನ ಮಸಗುಪ್ಪಿ ಗ್ರಾಮದಲ್ಲಿ ಬುಧವಾರದಂದು ಶ್ರೀಮತಿ ಭೀಮವ್ವ ಲಕ್ಷ್ಮಣರಾವ್ ಜಾರಕಿಹೊಳಿ ಮೆಮೋರಿಯಲ್ ಚಾರಿಟೇಬಲ್ ಟ್ರಸ್ಟ್ ಮತ್ತು ಕಪರಟ್ಟಿ-ಕಳ್ಳಿಗುದ್ದಿ ಮಠದವರು ಜಂಟಿಯಾಗಿ ಹಮ್ಮಿಕೊಂಡ ಆಷಾಢ ಮಾಸದ ಪ್ರಯುಕ್ತ ಮಹರ್ಷಿ ಭಗೀರಥರ ಪೂಜೆ ಮತ್ತು ಪ್ರವಚನ ಸಮಾರೋಪದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ಬೆಳಗಾವಿ ಜಿಲ್ಲಾ ಹಾಲು ಉತ್ಪಾದಕರ ಸಂಘಗಳ ಒಕ್ಕೂಟದಲ್ಲಿ ಉಪ್ಪಾರ ಸಮಾಜಕ್ಕೆ ನಿರ್ದೇಶಕರನ್ನಾಗಿ ನೇಮಿಸುವ ಮೂಲಕ ಈ ಸಮಾಜಕ್ಕೆ ಪ್ರಾಶಸ್ತ್ಯ ನೀಡಲಾಗುವುದು ಎಂದರು.
ತಮ್ಮ ಕುಟುಂಬವು ರಾಜಕೀಯ, ಸಹಕಾರ, ಸಾಮಾಜಿಕ ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸಲು ಭಗೀರಥ ಉಪ್ಪಾರ ಸಮಾಜವೂ ಸೇರಿದಂತೆ ಎಲ್ಲ ವರ್ಗದವರು ಬೆಂಬಲವನ್ನು ಸೂಚಿಸುತ್ತ ಬರುತ್ತಿದ್ದಾರೆ. ಜತೆಗೆ ಮೂಡಲಗಿ- ಗೋಕಾಕ ಕ್ಷೇತ್ರದಲ್ಲಿರುವ ಎಲ್ಲ ಸಮಾಜಗಳ ಬಾಂಧವರು ಪ್ರೀತಿ ವಿಶ್ವಾಸವನ್ನು ತೋರಿಸುತ್ತಿದ್ದಾರೆ. ಜನರು ನೀಡುತ್ತಿರುವ ಪ್ರೀತಿಯಿಂದಾಗಿ ದೇಶದ ಇತಿಹಾಸದಲ್ಲಿ ಒಂದೇ ಕುಟುಂಬದ ಐವರು ಏಕಕಾಲಕ್ಕೆ ಸಂಸತ್- ಶಾಸನ ಸಭೆಯ ಪ್ರತಿನಿಧಿಗಳಾಗಿ ಆಯ್ಕೆ ಮಾಡಿರುವುದು ಇತಿಹಾಸದ ಪುಟಗಳಲ್ಲಿ ದಾಖಲಾಗಿದೆ. ನಮ್ಮ ಒಂದೇ ಕುಟುಂಬದಲ್ಲಿ ನಾಲ್ವರು ಶಾಸಕರು ಮತ್ತು ಒಬ್ಬರು ಸಂಸತ್ ಸದಸ್ಯರನ್ನಾಗಿ ಜನರು ಆಯ್ಕೆ ಮಾಡಿದ್ದಾರೆ. ಇದು ಕುಟುಂಬ ರಾಜಕಾರಣವಲ್ಲ. ಜನರೇ ನಮಗೆ ಅಧಿಕಾರವನ್ನು ನೀಡುತ್ತ ಆಶೀರ್ವಾದವನ್ನು ಮಾಡುತ್ತ ಬರುತ್ತಿದ್ದಾರೆ. ಅದಕ್ಕಾಗಿ ಸಮಸ್ತ ಜನರಿಗೆ ತಮ್ಮ ಕುಟುಂಬವು ಸದಾ ಚಿರ ಋಣಿಯಾಗಿದೆ ಎಂದು ಅವರು ಹೇಳಿದರು.
ಅಕ್ಟೋಬರ್ ತಿಂಗಳಲ್ಲಿ ಜರುಗುವ ಪ್ರತಿಷ್ಟಿತ ಬಿಡಿಸಿಸಿ ಬ್ಯಾಂಕ್ ಚುನಾವಣೆಯಲ್ಲಿ ಮೂಡಲಗಿ ಮತ್ತು ಗೋಕಾಕ ತಾಲ್ಲೂಕುಗಳ ವಿವಿಧ ಸಮಾಜಗಳ ಮುಖಂಡರ ಸಭೆಯನ್ನು ಕರೆಯಲಾಗುವುದು. ಮೂಡಲಗಿ- ಗೋಕಾಕ ತಾಲ್ಲೂಕಿನ ಎರಡೂ ಸ್ಥಾನಗಳಿಗೆ ಒಮ್ಮತದ ಅಭ್ಯರ್ಥಿಯನ್ನು ಹಾಕಲಾಗುವುದು. ರೈತರ ಕಷ್ಟಕ್ಕೆ ಸ್ಪಂದಿಸುವ ಜನಪರ ವ್ಯಕ್ತಿಗಳನ್ನು ಆಯ್ಕೆ ಮಾಡಲಾಗುವುದು ಎಂದು ಅವರು ತಿಳಿಸಿದರು.
ಮಸಗುಪ್ಪಿ ಗ್ರಾಮದ ಸರ್ಕಾರಿ ಪ್ರಾಥಮಿಕ ಶಾಲೆಯು ಶತ ಸಂಭ್ರಮವನ್ನು ಆಚರಿಸುತ್ತಿದ್ದು, ಇದನ್ನು ಅದ್ದೂರಿಯಾಗಿ ಆಚರಿಸಲಾಗುತ್ತದೆ ಎಂದು ಶಾಸಕ ಬಾಲಚಂದ್ರ ಜಾರಕಿಹೊಳಿಯವರು ಹೇಳಿದರು.
ಪ್ರತಿ ಆಷಾಢ ಮಾಸದ ಪ್ರಯುಕ್ತ ಕಪರಟ್ಟಿ- ಕಳ್ಳಿಗುದ್ದಿ ಸ್ವಾಮಿಗಳು ಮಹಾನ್ ಪುರುಷರನ್ನು ಸ್ಮರಿಸುವ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಬರುತ್ತಿದ್ದಾರೆ. ಭಕ್ತ ಕನಕದಾಸರು, ವಿಶ್ವಜ್ಯೋತಿ ಬಸವೇಶ್ವರರ ಪ್ರವಚನಗಳನ್ನು ಜನರಿಗೆ ತಿಳಿಸುವ ಕೆಲಸವನ್ನು ಮಾಡುತ್ತಿದ್ದಾರೆ. ಮಹರ್ಷಿ ಭಗೀರಥ ಮಹಾರಾಜರ ಕಾರ್ಯಕ್ರಮವನ್ನು ಸಹ ಉತ್ತಮವಾಗಿ ಆಯೋಜನೆ ಮಾಡಿದ್ದಾರೆ. ಅದಕ್ಕಾಗಿ ಬಸವರಾಜ ಸ್ವಾಮಿಗಳಿಗೆ ಅಭಿನಂದನೆ ಸಲ್ಲಿಸುತ್ತೇನೆ ಎಂದು ಬಾಲಚಂದ್ರ ಜಾರಕಿಹೊಳಿ ಅವರು ತಿಳಿಸಿದರು.
ಹೊಸದುರ್ಗ ಭಗೀರಥ ಪೀಠದ ಜಗದ್ಗುರು ಪುರುಷೋತ್ತಮಾನಂದಪುರಿ ಮಹಾಸ್ವಾಮಿಗಳು ಮಾತನಾಡಿ, ಶಾಸಕ ಬಾಲಚಂದ್ರ ಜಾರಕಿಹೊಳಿ ಮತ್ತು ಅವರ ಕುಟುಂಬವು ನಮ್ಮ ಸಮಾಜಕ್ಕೆ ದೊಡ್ಡ ಶಕ್ತಿಯಾಗಿ ನಿಂತಿದ್ದಾರೆ. ನಮ್ಮ ಸಮಾಜ ಬಾಂಧವರ ಆಶೋತ್ತರಗಳನ್ನು ಈಡೇರಿಸುತ್ತಿದ್ದಾರೆ. ಭಗೀರಥ ಪೀಠದ ಅಭಿವೃದ್ಧಿಗೆ ಪ್ರತಿ ಹಂತದಲ್ಲೂ ತನು,ಮನ, ಧನದ ಸೇವೆಯನ್ನು ಮಾಡುತ್ತಿದ್ದಾರೆ. ನಮ್ಮ ಶ್ರೀ ಮಠಕ್ಕೆ ಸಾಕಷ್ಟು ದೇಣಿಗೆಯನ್ನು ಸಲ್ಲಿಸುವ ಮೂಲಕ ಸೇವಾ ಕಾರ್ಯಗಳಿಗೆ ತಮ್ಮನ್ನು ತಾವು ಅರ್ಪಿಸಿಕೊಂಡಿದ್ದಾರೆ. ಇಂತಹ ಶಾಸಕರು ನಿಮಗೆ ಸಿಕ್ಕಿರುವುದು ಅದೃಷ್ಟವಂತರು ಎಂದು ಶಾಸಕರ ಗುಣಗಾನ ಮಾಡಿದರು.
ಕಪರಟ್ಟಿ- ಕಳ್ಳಿಗುದ್ದಿ ಮಠದ ಬಸವರಾಜ ಸ್ವಾಮಿಗಳು ಪ್ರಾಸ್ತಾವಿಕ ಭಾಷಣ ಮಾಡಿದರು. ವಿಶ್ವಜ್ಯೋತಿ ಬಸವೇಶ್ವರರು, ಭಕ್ತ
ಕನಕದಾಸರ ಕುರಿತು ಈಗಾಗಲೇ ತಾಲ್ಲೂಕು ಮಟ್ಟದಲ್ಲಿ ಕಾರ್ಯಕ್ರಮಗಳನ್ನು ನಡೆಸಿ, ಪುಸ್ತಕಗಳನ್ನು ಸಹ ಪ್ರಕಟಿಸಲಾಗಿದೆ. ಶಾಸಕ ಬಾಲಚಂದ್ರ ಜಾರಕಿಹೊಳಿ ಮತ್ತವರ ಕುಟುಂಬದ ಸಹಕಾರದಿಂದ ಈ ಬಾರಿ ಮಹರ್ಷಿ ಭಗೀರಥರ ಬಗ್ಗೆ ಜನಜಾಗೃತಿ ಮೂಡಿಸುವ ಕೆಲಸ ನಡೆದಿದೆ. ಪ್ರತಿ ಆಷಾಢ
ಮಾಸದಲ್ಲಿ ಮಹಾನ್ ಪುರುಷರ ಕುರಿತು ಜನರಲ್ಲಿ ಅರಿವು ಮೂಡಿಸಲು ಧಾರ್ಮಿಕ ಕಾರ್ಯಕ್ರಮಗಳನ್ನು ನಡೆಸಲು ಉದ್ದೇಶಿಸಲಾಗಿದೆ ಎಂದು ತಿಳಿಸಿದರು.
ಖಡಕಭಾವಿಯ ಧರೇಶ್ವರ ಸ್ವಾಮಿಗಳು. ಯುವ ಮುಖಂಡ ಸರ್ವೋತ್ತಮ ಜಾರಕಿಹೊಳಿ, ಮೂಡಲಗಿ ಮತ್ತು ಗೋಕಾಕ ತಾಲ್ಲೂಕಿನ ಭಗೀರಥ ಉಪ್ಪಾರ ಸಮಾಜ ಬಾಂಧವರು ಸೇರಿದಂತೆ ವಿವಿಧ ಸಮಾಜಗಳ ಮುಖಂಡರು ಇದರಲ್ಲಿ ಭಾಗಿಯಾಗಿದ್ದರು.