ಮೂಡಲಗಿ: ಬ್ರಿಟೀಷರ ವಿರುದ್ಧ ಅಪ್ರತಿಮವಾಗಿ ಹೋರಾಡಿ ದೇಶಕ್ಕಾಗಿ ತನ್ನ ಅಮೂಲ್ಯ ಪ್ರಾಣವನ್ನೇ ಬಲಿಕೊಟ್ಟ ಸ್ವಾತಂತ್ರ್ಯ ವೀರ ಸಂಗೊಳ್ಳಿ ರಾಯಣ್ಣ ನ ಮೂರ್ತಿ ಪ್ರತಿಷ್ಠಾಪನೆಗೆ ಪೊಲೀಸರು ಅನುಮತಿ ನೀಡದೇ ಇದ್ದದ್ದು ಅಕ್ಷಮ್ಯ. ತಕ್ಷಣವೇ ಪೊಲೀಸರು ಮೂರ್ತಿ ಪ್ರತಿಷ್ಠಾಪನೆಗೆ ಕೊಡದಿದ್ದರೆ ಕನ್ನಡ ಪರ ಸಂಘಟನೆಗಳು ಹಾಗೂ ರಾಯಣ್ಣ ಅಭಿಮಾನಿಗಳಿಂದ ರಾಜ್ಯಾದ್ಯಂತ ಉಗ್ರ ಹೋರಾಟ ಮಾಡಲಾಗುವುದು ಎಂದು ಬಿಜೆಪಿ ಮುಖಂಡ ಪ್ರಕಾಶ ಮಾದರ ಹೇಳಿದರು.
ಬೆಳಗಾವಿ ಸಮೀಪ ಪೀರನವಾಡಿಯಲ್ಲಿ ಸಂಗೊಳ್ಳಿ ರಾಯಣ್ಣನ ಮೂರ್ತಿ ಸ್ಥಾಪನೆಗೆ ಅನುಮತಿ ನೀಡಬೇಕೆಂಬ ಮನವಿಯನ್ನು ಪ್ರಾದೇಶಿಕ ಕುರುಬರ ಸಂಘದ ಅಧ್ಯಕ್ಷ ಡಾ.ಎಸ್ ಎಸ್ ಪಾಟೀಲ ಹಾಗೂ ಕ್ರಾಂತಿ ವೀರ ಸಂಗೊಳ್ಳಿ ರಾಯಣ್ಣ ಗ್ರಾಮೀಣಾಭಿವೃದ್ಧಿ ಸಂಘದ ಅಧ್ಯಕ್ಷ ಸಂತೋಷ ಕಮತಿ ನೇತೃತ್ವದಲ್ಲಿ ಮೂಡಲಗಿ ತಾಲೂಕಾ ದಂಡಾಧಿಕಾರಿಗಳ ಮೂಲಕ ಜಿಲ್ಲಾಧಿಕಾರಿಗಳಿಗೆ ಸಲ್ಲಿಸಲಾಯಿತು.
ರಾಜ್ಯ ಯುವ ಸಂಘಗಳ ಒಕ್ಕೂಟದ ಅಧ್ಯಕ್ಷ ಸಿದ್ದಣ್ಣ ದುರದುಂಡಿ ಮಾತನಾಡಿ, ರಾಯಣ್ಣ ಮೂರ್ತಿ ಸ್ಥಾಪನೆಗೆ ಆಗ್ರಹಿಸಿದರು.
ಈ ಸಂದರ್ಭದಲ್ಲಿ ತಾಲೂಕಾ ನವನಿರ್ಮಾಣ ಸಂಘದ ಅಧ್ಯಕ್ಷ ಭರತ ನಾಯಿಕ, ಕರವೇ ತಾಲೂಕಾ ಅಧ್ಯಕ್ಷ ಸಾವಂತ ಹೊಸಮನಿ, ಅರಭಾವಿ ಬ್ಲಾಕ್ ಬಿಜೆಪಿ ಅಧ್ಯಕ್ಷ ಮಹಾದೇವ ಶೆಕ್ಕಿ, ಯುವ ಜೀವನ ಸೇವಾ ಸಂಸ್ಥೆ ಅಧ್ಯಕ್ಷ ಈರಪ್ಪ ಢವಳೇಶ್ವರ, ಜಯಕರ್ನಾಟಕ ಸಂಘದ ಅಧ್ಯಕ್ಷ ಶಿವರಡ್ಡಿ ಹುಚರಡ್ಡಿ, ಸುರೇಶ ನಾಯಿಕ, ಡಾ.ಶಿವಬಸು ಬಸಳಿಗುಂದಿ, ಡಾ.ಸಿದ್ದು ಶಾಬಣ್ಣವರ, ಸಚಿನ್ ಲಂಕೆನ್ನವರ, ಶಾನೂರ ಕುರಬೇಟ, ಸದಾಶಿವ ಮೀಸಿ, ಮಹಾಲಿಂಗ ವಂಟಗೋಡಿ, ಮಂಜುನಾಥ ರೇಳೇಕರ,ವಕೀಲರಾದ ವಿಠ್ಠಲ ಪಾಟೀಲ , ಪಾಂಡು ಮಹೇಂದ್ರಕರ, ಮುತ್ತಪ್ಪಾ ಹುಡೇದ ಮುಂತಾದವರು ಉಪಸ್ಥಿತರಿದ್ದು ಮನವಿ ನೀಡಿದರು.
IN MUDALGI Latest Kannada News