ರೈತರಿಗೆ ತ್ವರಿತಗತಿಯಲ್ಲಿ ಬಿಲ್ ಸಂದಾಯ-ಶಾಸಕ ಬಾಲಚಂದ್ರ ಜಾರಕಿಹೊಳಿ
ಪ್ರಸಕ್ತ ಕಬ್ಬು ನುರಿಸುವ ಹಂಗಾಮಿಗೆ ಚಾಲನೆ ನೀಡಿದ ಸಿದ್ದಲಿಂಗ ಮಹಾಸ್ವಾಮಿಗಳು
ಗೋಕಾಕ: ಶಾಸಕ ಹಾಗೂ ಕೆಎಮ್‍ಎಫ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ಅವರ ಮಾರ್ಗದರ್ಶನದಲ್ಲಿ ಘಟಪ್ರಭಾ ಸಹಕಾರಿ ಸಕ್ಕರೆ ಕಾರ್ಖಾನೆಯು ರೈತರ ಸಹಕಾರದಿಂದ ಪ್ರಗತಿಪಥದತ್ತ ಸಾಗುತ್ತಿದೆ ಎಂದು ಕಾರ್ಖಾನೆಯ ಅಧ್ಯಕ್ಷ ಅಶೋಕ್ ಪಾಟೀಲ ಹೇಳಿದರು.
ಶುಕ್ರವಾರದಂದು ನಗರದ ಹೊರವಲಯದಲ್ಲಿರುವ ಘಟಪ್ರಭಾ ಸಹಕಾರಿ ಸಕ್ಕರೆ ಕಾರ್ಖಾನೆಯ ಸನ್ 2020-21ನೇ ಸಾಲಿನ ಕಬ್ಬು ನುರಿಸುವ ಹಂಗಾಮು ಪ್ರಾರಂಭೋತ್ಸವದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಪ್ರತಿ ವರ್ಷ ಕಬ್ಬು ಪೂರೈಕೆ ಮಾಡಿದಂತೆ ಈ ಹಂಗಾಮಿನಲ್ಲಿಯೂ ನಮ್ಮ ಕಾರ್ಖಾನೆಗೆ ಕಬ್ಬು ಪೂರೈಕೆ ಮಾಡುವ ಮೂಲಕ ಕಾರ್ಖಾನೆಯ ಒಳಿತಿಗಾಗಿ ಸಹಕರಿಸುವಂತೆ ರೈತರಲ್ಲಿ ಕೋರಿದರು.
ಅರಭಾಂವಿ ದುರದುಂಡೀಶ್ವರ ಮಠದ ಶ್ರೀಗಳ ಆಶೀರ್ವಾದಿಂದ ನಮ್ಮ ಕಾರ್ಖಾನೆಯು ಪಾವನವಾಗಿದ್ದು, ಜಾರಕಿಹೊಳಿ ಸಹೋದರರ ಮಾರ್ಗದರ್ಶನದಲ್ಲಿ ಕಾರ್ಖಾನೆಯು ಅಭಿವೃದ್ಧಿ ಪಥದತ್ತ ಸಾಗುತ್ತಿದೆ ಎಂದು ಹೇಳಿದರು.
ಅರಭಾಂವಿ ದುರದುಂಡೀಶ್ವರಮಠದ ಸಿದ್ದಲಿಂಗ ಮಹಾಸ್ವಾಮಿಗಳು ಪ್ರಸಕ್ತ ಕಬ್ಬು ನುರಿಸುವ ಹಂಗಾಮಿಗೆ ಪೂಜೆ ಸಲ್ಲಿಸುವ ಮೂಲಕ ಚಾಲನೆ ನೀಡಿದರು.
ಕಾರ್ಖಾನೆಯ ಉಪಾಧ್ಯಕ್ಷ ರಾಮಣ್ಣಾ ಮಹಾರೆಡ್ಡಿ, ನಿರ್ದೇಶಕರಾದ ಬಸಗೌಡ ಪಾಟೀಲ(ಕಲ್ಲೋಳಿ) ಕೆಂಚನಗೌಡ ಪಾಟೀಲ, ಕೃಷ್ಣಪ್ಪ ಬಂಡ್ರೋಳ್ಳಿ, ಶಿವಲಿಂಗ ಪೂಜೇರಿ, ಮಹಾದೇವಪ್ಪ ಭೋವಿ, ಮಾಳಪ್ಪ ಜಾಗನೂರ, ಸಿದ್ದಲಿಂಗ ಕಂಬಳಿ, ಮಲ್ಲಿಕಾರ್ಜುನ ಕಬ್ಬೂರ, ಗಿರೀಶ ಹಳ್ಳೂರ, ಯಲ್ಲವ್ವ ಸಾರಾಪೂರ, ಲಕ್ಕವ್ವ ಬೆಳಗಲಿ, ಕಾರ್ಖಾನೆಯ ಸಲಹಾ ಸಮಿತಿಯ ಸದಸ್ಯರಾದ ವಿಕ್ರಮ ಅಂಗಡಿ, ಸೈದಪ್ಪ ಗದಾಡಿ, ಬಸವರಾಜ ಕಲ್ಯಾಣಶೆಟ್ಟಿ, ವ್ಯವಸ್ಥಾಪಕ ನಿರ್ದೆಶಕ ಬಸವರಾಜ ಮಂಟೂರ, ಕಬ್ಬು ಅಭಿವೃದ್ದಿ ಅಧಿಕಾರಿ ಜೆ.ಆರ್.ಬಬಲೇಶ್ವರ, ಸಹಕಾರಿಗಳು, ರೈತ ಬಾಂಧವರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.
ಕೋಟ್: ಪ್ರಸಕ್ತ ಹಂಗಾಮಿನಲ್ಲಿ ನಮ್ಮ ಕಾರ್ಖಾನೆಯು 4 ಲಕ್ಷ ಮೆಟ್ರಿಕ್ ಟನ್ ಕಬ್ಬು ನುರಿಸಿ 5 ಲಕ್ಷ ಕ್ವೀಂಟಲ್ ಸಕ್ಕರೆ ಉತ್ಪಾದಿಸುವ ಗುರಿಯನ್ನು ಹೊಂದಿದ್ದೇವೆ. ಕಾರ್ಖಾನೆಯ ಪ್ರಗತಿಯಲ್ಲಿ ರೈತರ ಸಹಕಾರ ಮುಖ್ಯವಾಗಿದೆ. ಈ ಭಾಗದ ರೈತರ ಜೀವನಾಡಿಯಾಗಿರುವ ಈ ಸಹಕಾರಿ ಕಾರ್ಖಾನೆಯು ರೈತರದ್ದೆಯಾಗಿದ್ದು, ತಮ್ಮ ಕಬ್ಬನ್ನು ಕಾರ್ಖಾನೆಗೆ ಪೂರೈಸಿ ತಮ್ಮ ಆರ್ಥಿಕ ಪ್ರಗತಿಯೊಂದಿಗೆ ಕಾರ್ಖಾನೆಯ ಅಭಿವೃದ್ದಿಗೆ ಸಹಕರಿಸಿ. ಈ ವರ್ಷ ವರುಣನ ಕೃಪೆಯಿಂದ ಮಳೆ-ಬೆಳೆ ಚೆನ್ನಾಗಿದ್ದು. ಕಬ್ಬಿನ ಫಸಲು ಉತ್ತಮವಾಗಿದೆ. ನಮ್ಮ ನೆರೆಹೊರೆಯ ಕಾರ್ಖಾನೆಗಳು ನಿಗದಿಪಡಿಸುವ ದರವನ್ನು ಅನುಸರಿಸಿ ತ್ವರಿತಗತಿಯಲ್ಲಿ ರೈತರಿಗೆ ಬಿಲ್ ಸಂದಾಯ ಮಾಡಲಾಗುವುದು- ಶಾಸಕ ಬಾಲಚಂದ್ರ ಜಾರಕಿಹೊಳಿ.