ಮೂಡಲಗಿ ಸಮೀಪದ ಮುನ್ಯಾಳದಲ್ಲಿ ಅಧಿಕ ಮಾಸದ ನಿಮಿತ್ತವಾಗಿ ಒಂದು ತಿಂಗಳ ಪರ್ಯಂತರವಾಗಿ ‘ಮನೆ, ಮನೆಗೆ ಆಧ್ಯಾತ್ಮಿಕ ಪ್ರವಚನ’ ದ 16ನೇ ದಿನದ ಕಾರ್ಯಕ್ರಮದಲ್ಲಿ ಡಾ. ಅನಿಲ ಪಾಟೀಲ ಮಾತನಾಡಿದರು
ಡಾ. ಅನಿಲ ಪಾಟೀಲ ಸಲಹೆ
‘ದೇಹ, ಮನಸ್ಸಿನ ಸದೃಢತೆಯೇ ಕೊರೊನಾಕ್ಕೆ ಮದ್ದು’
ಮೂಡಲಗಿ: ‘ಕೊರೊನಾ ನಿರ್ಮೂಲನೆಗೆ ಸೂಕ್ತ ಲಸಿಕೆ ಲಭ್ಯವಾಗುವವರೆಗೆ ಪ್ರತಿಯೊಬ್ಬರು ಸೋಂಕಿನ ಬಗ್ಗೆ ಜಾಗೃತಿವಹಿಸುವುದು ಅವಶ್ಯವಿದೆ’ ಎಂದು ಮೂಡಲಗಿಯ ಸುರಕ್ಷಾ ವಿವಿದೋದ್ಧೇಶಗಳ ಸಹಕಾರಿ ಸಂಘದ ಮಾಜಿ ಅಧ್ಯಕ್ಷ ಡಾ. ಅನಿಲ ಪಾಟೀಲ ಹೇಳಿದರು.
ತಾಲ್ಲೂಕಿನ ಮುನ್ಯಾಳ ಗ್ರಾಮದಲ್ಲಿ ಅಧಿಕ ಮಾಸದ ನಿಮಿತ್ತವಾಗಿ ಒಂದು ತಿಂಗಳ ಪರ್ಯಂತರವಾಗಿ ಹಮ್ಮಿಕೊಂಡಿರುವ ‘ಮನೆ, ಮನೆಗೆ ಅರುಹಿನ ಅರಮನೆ ಪ್ರವಚನ ಮತ್ತು ಕೋವಿಡ್ ಅರಿವು’ ಅಭಿಯಾನದ ಸಿದ್ರಾಮಯ್ಯ ಹಿರೇಮಠ ಕುಟುಂಬದವರ ಆತಿಥ್ಯದಲ್ಲಿ ಶನಿವಾರ ಜರುಗಿದ 16ನೇ ದಿನದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು ವಿಶ್ವ ಆರೋಗ್ಯ ಸಂಸ್ಥೆ ಸೇರಿದಂತೆ ಜಗತ್ತಿನ ಎಲ್ಲ ವಿಜ್ಞಾನಿಗಳು ಲಸಿಕೆಗಾಗಿ ಶ್ರಮಿಸುತ್ತಿದ್ದಾರೆ ಎಂದರು.
ನಿಪಾ, ಎಬೋಲಾ ಮತ್ತು ಸಾರ್ಸ್‍ದ ಇನ್ನೊಂದು ರೂಪ ಕೊರೊನಾ ಸೋಂಕು ಆಗಿದೆ. ಜನರು ರೋಗ ನಿರೋಧಕ ಶಕ್ತಿ ವೃದ್ಧಿಸಿಕೊಳ್ಳಬೇಕು. ಅದಕ್ಕಾಗಿ ಉತ್ತಮ ಆಹಾರ, ಶುಚಿತ್ವ ಪರಿಸರ ಬೆಳೆಸುವುದು, ಉತ್ತಮ ಆಚಾರ, ವಿಚಾರಗಳ ಮೂಲಕ ಮನಸ್ಸನ್ನು ಸದೃಢಗೊಳಿಸಿಕೊಳ್ಳಬೇಕು ಮತ್ತು ಆತ್ಮವಿಶ್ವಾಸವನ್ನು ಬೆಳೆಸಿಕೊಳ್ಳಬೇಕು ಎಂದರು.
ಸುಣಧೋಳಿಯ ಜಡಿಸಿದ್ಧೇಶ್ವರ ಮಠದ ಪೀಠಾಧಿಪತಿ ಶ್ರೀ ಶಿವಾನಂದ ಸ್ವಾಮೀಜಿಗಳು ಮಾತನಾಡಿ ಭಾರತೀಯ ಸಂಸ್ಕøತಿ ಮತ್ತು ಆಚರಣೆಗಳಲ್ಲಿ ಆರೋಗ್ಯಕರವಾದ ಅಂಶಗಳು ಒಳಗೊಂಡಿವೆ. ಅಂಥ ಆಚರಣೆ ಮತ್ತು ದೇಸಿ ಸಂಸ್ಕøತಿಯನ್ನು ಜನರು ಎಂದಿಗೂ ಬಿಡಬಾರದು ಎಂದರು.
ಪ್ರವಚನ, ಸತ್ಸಂಗ ಹಾಗೂ ಸತ್ಪುರುಷರ ನುಡಿಗಳಿಂದ ಜೀವನದಲ್ಲಿ ಶಾಂತಿ, ನೆಮ್ಮದಿ ದೊರೆಯುತ್ತದೆ. ಮುನ್ಯಾಳ ಶ್ರೀಗಳು ಅಧಿಕ ಮಾಸದಲ್ಲಿ ಮುನ್ಯಾಳ ಗ್ರಾಮದಲ್ಲಿ ಶ್ಲಾಘನೀಯ ಕಾರ್ಯ ಮಡುತ್ತಿದ್ದಾರೆ ಎಂದರು.
ಪ್ರವಚನಕಾರ ಶರಣ ಲಕ್ಷ್ಮಣ ದೇವರು ಆಧ್ಯಾತ್ಮಿಕ ಪ್ರವಚನ ನೀಡಿದರು.
ಸಾನ್ನಿಧ್ಯವಹಿಸಿದ್ದ ಭಾಗೋಜಿಕೊಪ್ಪ, ಮುನ್ಯಾಳ, ರಂಗಾಪುರದ ಸದಾಶಿವಯೋಗೀಶ್ವರ ಮಠದ ಡಾ. ಶಿವಲಿಂಗ ಮುರುಘರಾಜೇಂದ್ರ ಶಿವಾಚಾರ್ಯ ಸ್ವಾಮೀಜಿ ಆಶೀರ್ವಚನ ನೀಡಿದರು.
ಸಮಾರಂಭದಲ್ಲಿ ವೇದಮೂರ್ತಿ ಮಡಿವಾಳಯ್ಯ ಹಿರೇಮಠ ಅವರನ್ನು ಸನ್ಮಾನಿಸಿ ಗೌರವಿಸಿದರು.
ಕಾರ್ತಿಕಶಾಸ್ತ್ರೀ, ವೀರಯ್ಯಶಾಸ್ತ್ರೀಗಳು ಮಂತ್ರಘೋಷ ಪಠಣ ಮಾಡಿದರು. ಐಶ್ವರ್ಯ ಹಣಮಂತ ತಳವಾರ ಪ್ರಾರ್ಥಿಸಿದರು.
ಮಡಿವಾಳಯ್ಯ ಹಿರೇಮಠ, ಸಿದ್ರಾಮಯ್ಯ ಹಿರೇಮಠ, ಸತ್ಯಪ್ಪ ಗೋಡಿಗೌಡರ, ಮಹಾದೇವ ಬೆಳಗಲಿ, ಆನಂದರಾವ ನಾಯ್ಕ್, ಡಾ. ಎಸ್.ಎಸ್. ಪಾಟೀಲ, ಸಂಗಪ್ಪ ಸೂರಣ್ಣವರ ಇದ್ದರು.
ಡಾ. ಕೆ.ಎಚ್. ನಾಗರಾಳ ಪ್ರಾಸ್ತಾವಿಕ ಮಾತನಾಡಿ ನಿರೂಪಿಸಿದರು, ಶಿಕ್ಷಕ ಪ್ರವೀಣ ಹುಕ್ಕೇರಿ ವಂದಿಸಿದರು.