ಮೂಡಲಗಿ: ರೈತರ ಪಾಲಿಗೆ ವರವಾಗಬೇಕಿದ್ದ ಮಳೆರಾಯ ಈ ಬಾರಿ ಶಾಪವಾಗಿದ್ದಾನೆ. ನಿರಂತರವಾಗಿ ಸುರಿದ ಅಕಾಲಿಕ ಮಳೆಯಿಂದಾಗಿ ಮುಂಗಾರು ಬೆಳೆಗಳಾದ ಗೋವಿನಜೋಳ, ಕಬ್ಬು, ರೇಷ್ಮೆ ಹಾಳಾಗಿ ಹೋಗಿದ್ದು, ಕೈಗೆ ಬಂದ ತುತ್ತು ಬಾಯಿಗೆ ಬರದಂತಾಗಿ ರೈತ ಕಂಗಾಲಾಗಿದ್ದಾನೆ ಎಂದು ಜೆಡಿಎಸ್ ಬೆಳಗಾವಿಯ ಜಿಲ್ಲಾ ಅಧ್ಯಕ್ಷ ಶಂಕರ ಮಾಡಲಗಿ ಹೇಳಿದರು.
ಅರಭಾವಿ ಕ್ಷೇತ್ರದ ಮೂಡಲಗಿ, ನಾಗನೂರ, ಕಲ್ಲೋಳಿ, ತುಕ್ಕಾನಟ್ಟಿ, ರಾಜಪೂರ ಗ್ರಾಮಗಳಿಗೆ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಅವರ ಆದೇಶದ ಮೇರಿಗೆ ರವಿವಾರದಂದು ಭೇಟಿ ನೀಡಿ ಬೆಳೆ ಸಮೀಕ್ಷೆ ನಡೆಸಿ ಮಾತನಾಡಿ, ಸಪ್ಟಂಬರ್ ತಿಂಗಳಲ್ಲಿ ಹೆಚ್ಚಾಗಿ ಸುರಿದ ಭಾರೀ ಮಳೆಯಿಂದಾಗಿ ಅಪಾರ ಪ್ರಮಾಣದಲ್ಲಿ ಬೆಳೆಗಳು ಹಾನಿಯಾಗಿ ಸಂಕಷ್ಟಕ್ಕೆ ಸಿಲುಕಿದ್ದಾರೆ. ಕೊರೋನಾ ಸಂದರ್ಭದಲ್ಲಿ ಸಾಕಷ್ಟು ನೋವುಗಳನ್ನು ಅನುಭವಿಸಿದ ರೈತರಿಗೆ ಸೆಪ್ಟೆಂಬರ್ ತಿಂಗಳಲ್ಲಿ ಸುರಿದ ಮಳೆ ಮತ್ತಷ್ಟು ಹಾನಿಯನ್ನುಂಟು ಮಾಡಿದ್ದು, ಗಾಯದ ಮೇಲೆ ಬರೆ ಎಳೆದಂತಾಗಿದೆ ಎಂದರು.
ಜೆಡಿಎಸ್ ಮುಖಂಡ ಭೀಮಪ್ಪ ಗಡಾದ ಮಾತನಾಡಿ, ಕಳೆದ ಎರಡು ವಾರದಿಂದ ನಿರಂತರವಾಗಿ ಸುರಿಯುತ್ತಿರುವ ಮಳೆಯಿಂದಾಗಿ ಗೋವಿನ ಜೋಳ ಬೆಳೆಯೂ ಸಂಪೂರ್ಣವಾಗಿ ಕೈಕೊಡುವ ಸಂಭವವಿದೆ.ಗೋವಿನಜೋಳ ಕೊಯ್ಲು ಮಾಡಿ ರಾಶಿ ಮಾಡುವ ಈ ಸಂದರ್ಭದಲ್ಲಿ ಮಳೆಯಾದರೆ ಗೋವಿನಜೋಳ ಬೆಳೆ ಬರುವುದೇ ಕಷ್ಟ. ಅಲ್ಲದೆ ಮಳೆಯಲ್ಲಿ ಬೇರುಗಳು ನೆನೆದು ಬೆಳೆ ನೆಲಕ್ಕೆ ಬಿದ್ದು ಹೋಗುವುದರಿಂದ ಬೆಳೆ ಬರುವುದೇ ದುಸ್ತರವಾಗಿದೆ. ಬೆಳೆಯಿಂದ ಸಾಕಷ್ಟು ಹಾನಿ ಅನುಭಸಿರುವ ರೈತರಿಗೆ ಬೆಳೆಯೂ ಕೈಕೊಟ್ಟರೆ ಮತ್ತಷ್ಟು ಸಂಕಷ್ಟ ಎದುರಾಗಲಿದೆ ಎಂದು ಹೇಳಿದರು.
ವೀಕ್ಷಣೆ ಸಂದರ್ಭದಲ್ಲಿ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಅವರಿಗೆ ದೂರವಾಣಿ ಮೂಲಕ ಇಲ್ಲಿಯ ಪರಿಸ್ಥಿತಿಯ ಬಗ್ಗೆ ಸ್ವವಿವರವಾಗಿ ಮಾಹಿತಿ ನೀಡಲಾಗಿದೆ ಎಂದರು
ಜಿಲ್ಲಾ ಉಪಾಧ್ಯಕ್ಷ ಪ್ರಕಾಶ ಸೋನಾಲ್ಕರ ಮಾತನಾಡಿ, ಲಾಕ್ಡೌನ್ನಿಂದ ಸಂಕಷ್ಟಕ್ಕೆ ಸಿಲುಕಿದ ರೈತರು ಈಗ ಅಕಾಲಿಕ ಮಳೆಯಿಂದಾಗಿ ಮತ್ತಷ್ಟು ಸಂಕಷ್ಟಕ್ಕೆ ಸಿಲುಕಿದ್ದಾರೆ. ಭಾರೀ ಮಳೆಗೆ ಬೆಳೆಗಳು ಹಾನಿಯಾಗಿದ್ದು, ವರುಣನ ಅಬ್ಬರಕ್ಕೆ ರೈತರು ಚಿಂತೆ ಮಾಡುವಂತಾಗಿದೆ. ಕಳೆದ ಎರಡು ವಾರಗಳಿಂದ ಜಿಲ್ಲೆಯಲ್ಲಿ ಮಳೆ ಬರುತಿದ್ದು, ಇದರಿಂದ ಅಪಾರ ಪ್ರಮಾಣದ ಬೆಳೆ ಸಂಪೂರ್ಣ ನೆಲಕಚ್ಚಿದೆ ಎಂದರು.
ಬೆಳೆ ಹಾನಿಯ ಬಗ್ಗೆ ಸರ್ಕಾರದ ಗಮನಕ್ಕೆ ತಂದು ರೈತರಿಗೆ ಬರಬೇಕಾದ ಪರಿಹಾರದ ಹಣವನ್ನು ನೀಡುವಂತೆ ಸರ್ಕಾರಕ್ಕೆ ಒತ್ತಾಯ ಮಾಡಲು ಕುಮಾರಸ್ವಾಮಿಯವರಿಗೆ ಸಮೀಕ್ಷೆಯ ವರದಿಯನ್ನು ನೀಡಲಾಗುವುದು ಎಂದು ಹೇಳಿದರು.
ಈ ಸಂದರ್ಭದಲ್ಲಿ ಜೆಡಿಎಸ್ ಮುಖಂಡರಾದ ಈರಣ್ಣ ಕೊಣ್ಣೂರ, ಮಲ್ಲಪ್ಪ ತೇರದಾಳ, ಪಾರೀಶ ಉಪ್ಪಿನ್, ಮಲಿಕ್ ಅರಭಾವಿ ಹಾಗೂ ಅನೇಕ ಮುಖಂಡರು ಉಪಸ್ಥಿತರಿದ್ದರು.