‘ಧರ್ಮದಿಂದ ನಡೆದು ಬದುಕನ್ನು ಸಾರ್ಥಕಮಾಡಿಕೊಳ್ಳಬೇಕು’ ಸುಣಧೋಳಿಯ ಶಿವಾನಂದ ಸ್ವಾಮೀಜಿಗಳಿಂದ ನುಡಿ
ಮೂಡಲಗಿ: ‘ಸತ್ಯ, ಪ್ರಾಮಾಣಿಕತೆ ಹಾಗೂ ಧರ್ಮದಿಂದ ನಡೆಯುವ ಮೂಲಕ ಮನುಷ್ಯ ತನ್ನ ಬದುಕನ್ನು ಸಾರ್ಥಕಮಾಡಿಕೊಳ್ಳಬೇಕು’ ಎಂದು ಸುಣಧೋಳಿಯ ಜಡಿಸಿದ್ಧೇಶ್ವರ ಮಠದ ಪೀಠಾಧಿಪತಿ ಶಿವಾನಂದ ಸ್ವಾಮೀಜಿ ಹೇಳಿದರು.
ತಾಲ್ಲೂಕಿನ ಮುನ್ಯಾಳ ಗ್ರಾಮದಲ್ಲಿ ಅಧಿಕ ಮಾಸದ ನಿಮಿತ್ತವಾಗಿ ಒಂದು ತಿಂಗಳ ಪರ್ಯಂತರವಾಗಿ ಹಮ್ಮಿಕೊಂಡಿರುವ ‘ಮನೆ, ಮನೆಗೆ ಅರುಹಿನ ಅರಮನೆ ಪ್ರವಚನ ಮತ್ತು ಕೋವಿಡ್ ಅರಿವು’ ಅಭಿಯಾನದ ಆನಂದರಾವ ನಾಯ್ಕ್ ಕುಟುಂಬದವರ ಆತಿಥ್ಯದಲ್ಲಿ ಬುಧವಾರ ಮಲ್ಲಿಕಾರ್ಜುನಮಠದಲ್ಲಿ ಜರುಗಿದ 20ನೇ ದಿನದ ಆಧ್ಯಾತ್ಮಿಕ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು ಧರ್ಮದಿಂದ ನಡೆಯುವವರಿಗೆ ದೇವರು ಮುಕ್ತಿಯ ಮಾರ್ಗವನ್ನು ತೆರೆದಿರುತ್ತಾನೆ ಎಂದರು.
ತಿಗಡಿಯ ಶಂಕರಾನಂದ ಸ್ವಾಮೀಜಿ ಮಾತನಾಡಿ ಕೊರೊನಾ ಸೋಂಕಿಗೆ ಆಧ್ಯಾತ್ಮಿಕತೆಯು ಸಹ ಮದ್ದು ಆಗಿದೆ. ಆಧ್ಯಾತ್ಮಿಕತೆಯಿಂದ ಮನುಷ್ಯನಲ್ಲಿ ಶಾಂತಿ, ನೆಮ್ಮದಿ ಪ್ರಾಪ್ತಿಯಾಗಿ ದೇಹ, ಮನಸ್ಸಿನ ಸದೃಢತೆ ಬೆಳೆಯುತ್ತದೆ ಎಂದರು.
ಮುನ್ಯಾಳ ಶ್ರೀಗಳು ಅಧಿಕ ಮಾಸದಲ್ಲಿ ಗ್ರಾಮದ ಜನರಲ್ಲಿ ಅರುಹಿನ ಅರಮನೆ ಕಾರ್ಯಕ್ರಮದ ಮೂಲಕ ಶ್ಲಾಘನೀಯ ಕಾರ್ಯ ಮಾಡುತ್ತಿದ್ದಾರೆ ಎಂದರು.
ಭಾಗೋಜಿಕೊಪ್ಪ, ಮುನ್ಯಾಳ, ರಂಗಾಪುರದ ಸದಾಶಿವಯೋಗೀಶ್ವರ ಮಠದ ಡಾ. ಶಿವಲಿಂಗ ಮುರುಘರಾಜೇಂದ್ರ ಶಿವಾಚಾರ್ಯ ಸ್ವಾಮೀಜಿ ಆಶೀರ್ವಚನ ನೀಡಿದರು.
ಮೂಡಲಗಿಯ ಡಾ. ಜಯಪಾಲ ಉಪ್ಪಿನ ಕೋವಿಡ್-19 ಹರಡದಂತೆ ಮುಂಜಾಗೃತ ಕ್ರಮ ತೆಗೆದುಕೊಳ್ಳುವ ಬಗ್ಗೆ ಜನರಿಗೆ ತಿಳಿಸಿದರು.
ಪ್ರವಚನಕಾರ ಶರಣ ಲಕ್ಷ್ಮಣ ದೇವರು ಮಾನವ ಜನ್ಮ ದೊಡ್ಡದು ವಿಷಯ ಕುರಿತು ಪ್ರವಚನ ಮಾಡಿದರು.
ತೊಂಬತ್ತು ವಯಸ್ಸು ದಾಟಿದ 6 ಜನ ಹಿರಿಯ ವೃದ್ಧೆಯರನ್ನು ಸನ್ಮಾನಿಸಿ ಗೌರವಿಸಿದರು.
ರಾಮಣ್ಣ ನಾಯ್ಕ, ಶಿವಾನಂದ ಮಡಿವಾಳರ, ಗೋವಿಂದಪ್ಪ ಒಂಟಗೋಡಿ, ಮಲ್ಲಪ್ಪ ಮದಿಹಳ್ಳಿ ಅತಿಥಿಯಾಗಿ ಭಾಗವಹಿಸಿದ್ದರು.
ಪ್ರಾರಂಭದಲ್ಲಿ ಕಾರ್ತಿಕಶಾಸ್ತ್ರೀ, ವೀರಯ್ಯಶಾಸ್ತ್ರೀಗಳು ಮಂತ್ರಘೋಷ ಪಠಣ ಮಾಡಿದರು. ಐಶ್ವರ್ಯ ಹಣಮಂತ ತಳವಾರ ಪ್ರಾರ್ಥಿಸಿದರು. ಮಲ್ಲಿಕಾರ್ಜುನ ಭಜನಾ ತಂಡದಿಂದ ಭಕ್ತಿ ಗಾಯನವು ಜನರ ಮನಸೂರೆಗೊಳಿಸಿತು.
ಆನಂದರಾವ ನಾಯ್ಕ ಅವರು ಸ್ವಾಗತಿಸಿ ಪ್ರಾಸ್ತಾವಿಕ ಮಾತನಾಡಿದರು. ಡಾ. ಕೆ.ಎಚ್. ನಾಗರಾಳ ನಿರೂಪಿಸಿದರು.