ಕೇಂದ್ರ ಕೃಷಿ ವಿಧೇಯಕ, ಭೂಸುಧಾರಣೆ, ಎಪಿಎಂಸಿ ಕಾಯ್ದೆ ತಿದ್ದುಪಡಿ ರೈತ ಜಾಗೃತಿ ಅಭಿಯಾನ
ಮೂಡಲಗಿ: ಕೇಂದ್ರ ಮತ್ತು ರಾಜ್ಯ ಸರಕಾರ ಜಾರಿಗೆ ತಂದಿರುವ ನೂತನ ಕೃಷಿ ಕಾಯ್ದೆ ತಿದ್ದುಪಡಿ ಕುರಿತು ಕಾಂಗ್ರೇಸ್ ಮುಗ್ಧ ರೈತರ ದಾರಿ ತಪ್ಪಿಸುತ್ತಿದೆ. ಈ ಕುರಿತು ರಾಜ್ಯ ಬಿಜೆಪಿ ರೈತ ಮೋರ್ಚಾ ಪ್ರತಿಯೊಂದು ಗ್ರಾಮ ಮಟ್ಟದಲ್ಲೂ ರೈತರಿಗೆ ಹೊಸ ಮಸೂದೆಗಳ ಕುರಿತು ತಿಳಿವಳಿಕೆ ನೀಡುವ ಕಾರ್ಯ ಮಾಡುತ್ತಿದೆ ಎಂದು ರಾಜ್ಯಸಭಾ ಸದಸ್ಯರು ಹಾಗೂ ರಾಜ್ಯ ಬಿಜೆಪಿ ರೈತ ಮೋರ್ಚಾ ಅಧ್ಯಕ್ಷರಾದ ಈರಣ್ಣ ಕಡಾಡಿ ಹೇಳಿದರು.
ಮೂಡಲಗಿ ತಾಲೂಕಿನ ಹಳ್ಳೂರ ಗ್ರಾಮದಲ್ಲಿ ಅ. 14 ರಂದು ಶ್ರೀ ಮಹಾಲಕ್ಷ್ಮೀ ದೇವಸ್ಥಾನದ ಆವರಣದಲ್ಲಿ ಅರಭಾವಿ ಮಂಡಲ ಬಿಜೆಪಿ ರೈತ ಮೋರ್ಚಾದಿಂದ ಹಮ್ಮಿಕೊಂಡಿದ್ದ ರೈತ ಜಾಗೃತಿ ಅಭಿಯಾನವನ್ನು ಗೋಪೂಜೆ ಮಾಡುವುದರೊಂದಿಗೆ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಅವರು ರೈತ ತಾನು ಬೆಳೆದ ಬೆಳೆಗೆ ತಾನೇ ಮಾಲಿಕ, ತನಗೆ ಇಷ್ಟವಾದ ಸ್ಥಳದಲ್ಲಿ ಆತ ಯೋಗ್ಯ ಬೆಲೆಗೆ ಬೆಳೆ ಮಾರಾಟ ಮಾಡಬೇಕು. ಇದರಿಂದ ಎಪಿಎಂಸಿಗಳು ಮುಚ್ಚಲ್ಪಡುತ್ತವೆ ಎಂದು ಸುಳ್ಳು ವದಂತಿ ಹಬ್ಬಿಸಲಾಗುತ್ತಿದೆ. ಈ ಕುರಿತು ಈಗಾಗಲೇ ಸಂಬಂಧಿಸಿದ ಸಚಿವರು, ಸರಕಾರ ಸ್ಪಷ್ಟಪಡಿಸಿದ್ದು ಎಪಿಎಂಸಿಗಳು ಮುಚ್ಚುವುದಿಲ್ಲ ಎಂದು ಹೇಳಿದರು.
ಕೃಷಿ ಸಮ್ಮಾನ್, ಕಿಸಾನ್ ಮಾನಧನ್ ಸೇರಿ ಹಲವು ಯೋಜನೆಗಳನ್ನು ಕೇಂದ್ರ ಸರಕಾರ ರೂಪಿಸಿದೆ. ಇತ್ತೀಚೆಗೆ ಸಂಸತ್ ಅಧಿವೇಶನದ ವೇಳೆ ಪ್ರಧಾನಿ ನರೇಂದ್ರ ಮೋದಿ ಅವರು 22 ಬೆಳೆಗಳಿಗೆ ಬೆಂಬಲ ಬೆಲೆ ಘೋಷಿಸಿದ್ದಾರೆ. ಈ ಬಗ್ಗೆ ವಿಪಕ್ಷಗಳು ಮಾತನಾಡುವುದಿಲ್ಲ. ಹೀಗಾಗಿ ಬಿಜೆಪಿ ರೈತ ಮೋರ್ಚಾ ಜನರಿಗೆ ತಿಳಿಸುವ ಕಾರ್ಯಮಾಡುತ್ತಿದೆ ಎಂದು ಹೇಳಿದರು.
ಭೂಸುಧಾರಣಾ ಕಾಯ್ದೆಯಲ್ಲಿ ಐವರು ಇರುವ ಕುಟುಂಬಕ್ಕೆ 54 ಎಕರೆ ಭೂಮಿ ಹಾಗೂ ಅದಕ್ಕಿಂತ ಜಾಸ್ತಿಯಿದ್ದರೆ ಗರಿಷ್ಠ 108 ಎಕರೆ ಭೂಮಿ ಹಾಗೂ ಅದಕ್ಕಿಂತ ಜಾಸ್ತಿಯಿದ್ದರೆ ಗರಿಷ್ಠ 108 ಎಕರೆ ಭೂಮಿ ಖರೀದಿಗೆ ಮಾತ್ರವೇ ಅವಕಾಶವಿದೆ. ಕಾರ್ಪೋರೇಟ್‍ಗಳ ಕೈಯಲ್ಲಿ ಕೃಷಿ ಭೂಮಿಯನ್ನು ನೀಡುವ ಪ್ರಶ್ನೆಯೇ ಉದ್ಬವಿಸುವುದಿಲ್ಲ ಎಂದರು. ಮಸೂದೆಗಳಲ್ಲಿ ಏನಿದೆ, ಯಾವುದು ಸತ್ಯ, ಯಾವುದು ಸುಳ್ಳು? ಎಂಬುದರ ಕುರಿತು ಕರಪತ್ರಗಳ ಮೂಲಕ ರೈತರಿಗೆ ತಿಳಿಸುವ ಕಾರ್ಯ ಸತತ ನಡೆಯುತ್ತಿದೆ.
ಈ ಸಂದರ್ಭದಲ್ಲಿ ರಾಜ್ಯ ರೈತ ಮೋರ್ಚಾ ಉಪಾಧ್ಯಕ್ಷರಾದ ದುಂಡಪ್ಪ ಬೆಂಡವಾಡೆ, ಜಿಲ್ಲಾ ರೈತ ಮೋರ್ಚಾ ಅಧ್ಯಕ್ಷರಾದ ಶ್ರೀಕರ ಕುಲಕರ್ಣಿ, ಜಿಲ್ಲಾ ಪಂಚಾಯತ ಸದಸ್ಯೆ ಶ್ರೀಮತಿ ವಾಸಂತಿ ತೇರದಾಳ, ಪ್ರಮುಖರಾದ ಬಸಪ್ಪ ಸಂತಿ, ಪ್ರಧಾನ ಕಾರ್ಯದರ್ಶಿ ಆನಂದ ಮೂಡಲಗಿ, ಅರಭಾವಿ ರೈತ ಮೋರ್ಚಾ ಮಂಡಲ ಅಧ್ಯಕ್ಷರಾದ ತಮ್ಮಣ್ಣ ದೇವರ, ಪ್ರಕಾಶ ಮಾದರ, ರೈತ ಸಂಘದ ಚೂನಪ್ಪ ಪೂಜೇರಿ, ಶ್ರೀಕಾಂತ ಕೌಜಲಗಿ, ದಾಸಪ್ಪ ನಾಯಕ್, ಭೀಮಶಿ ಬಂಗಾರಿ, ಅಡಿವೆಪ್ಪ ಕುರಬೇಟ, ಸುರೇಶ ಮಠಪತಿ, ಸೇರಿದಂತೆ ರೈತ ಮೋರ್ಚಾದ ಜಿಲ್ಲಾ, ಮಂಡಲ ಪದಾಧಿಕಾರಿಗಳು, ಪಕ್ಷದ ಕಾರ್ಯಕರ್ತರು ಉಪಸ್ಥಿತರಿದ್ದರು.