ಸರ್ಕಾರಿ ಶಾಲಾ ಕೊಠಡಿಗಳ ದುರಸ್ತಿಗಾಗಿ ರೂ.5 ಲಕ್ಷ ದೇಣಿಗೆ
ಮೂಡಲಗಿ: ತಾಲ್ಲೂಕಿನ ಕಲ್ಲೋಳಿಯ ನೂರು ವರ್ಷಗಳನ್ನು ಪೂರೈಸಿರುವ ಸರ್ಕಾರಿ ಕನ್ನಡ ಹಿರಿಯ ಪ್ರಾಥಮಿಕ ಶಾಲೆಯ ದುರಸ್ತಿಗಾಗಿ ಶಿವಪ್ಪ ಬೆಳಕೂಡ ಅವರು ರೂ. 5 ಲಕ್ಷ ದೇಣಿಗೆಯನ್ನು ಕೊಡಲು ವಾಗ್ದಾನ ಮಾಡಿರುವರು.
ಕ್ಷೇತ್ರ ಶಿಕ್ಷಣಾಧಿಕಾರಿ ಅಜಿತ್ ಮನ್ನಿಕೇರಿ ಅವರು ದಾನಿಗಳಾದ ಶಿವಪ್ಪ ಬಿ. ಬೆಳಕೂಡ ಅವರನ್ನು ಇಲಾಖೆಯಿಂದ ಸನ್ಮಾನಿಸಿ ಮಾತನಾಡಿ ‘113 ವರ್ಷಗಳನ್ನು ಪೂರೈಸಿರುವ ಸರ್ಕಾರಿ ಶಾಲೆಯಲ್ಲಿ ಅನೇಕರು ಕಲಿತು ಸಾಧನೆ ಮಾಡಿದ್ದಾರೆ. ಶಾಲೆಯ 9 ಕೊಠಡಿಗಳ ಹೆಂಚು ಹಾಳಾಗಿದ್ದವು ಮತ್ತು ಕೊಠಡಿಗಳು ದುರಸ್ತಿಯಾಗಬೇಕಾಗಿತ್ತು. ಅದನ್ನು ಶಿವಪ್ಪ ಬೆಳಕೂಡ ಅವರು ಸ್ವಯಂಪ್ರೇರಣೆಯಾಗಿ ದುರಸ್ತಿಯ ವೆಚ್ಚ ಭರಿಸುವುದಾಗಿ ವಾಗ್ದಾನ ಮಾಡಿ ಕಾರ್ಯಪ್ರವತ್ತರಾಗಿದ್ದಾರೆ’ ಎಂದರು.
‘ಸರ್ಕಾರಿ ಶಾಲೆಗಳ ಸುಧಾರಣೆಯಲ್ಲಿ ಇಲಾಖೆಯೊಂದಿಗೆ ಸಮುದಾಯ ಜನರು ಕೈಜೋಡಿಸಿದರೆ ಶಿಕ್ಷಣ ಪ್ರಗತಿಗೆ ಸಹಕಾರಿಯಾಗುವುದು’ ಎಂದು ಶಿವಪ್ಪ ಬೆಳಕೂಡ ಅವರ ಕಾರ್ಯವನ್ನು ಶ್ಲಾಘೀಸಿದರು.
ಈ ಹಿಂದೆ ಶಿವಪ್ಪ ಬೆಳಕೂಡ ಅವರು ಇದೇ ಶಾಲಾ ಮಕ್ಕಳಿಗೆ 500 ಶಾಲಾ ಬ್ಯಾಗ್‍ಗಳನ್ನು ನೀಡಿದ್ದನ್ನು ಮನ್ನಿಕೇರಿ ಅವರು ನೆನಪಿಸಿಕೊಂಡರು.
ಶಾಲಾ ಮುಖ್ಯ ಶಿಕ್ಷಕ ಶಿವಲಿಂಗ ಗೋಸಬಾಳ, ಬಸವರಾಜ ಸಂಪಗಾಂವಿ, ಸಿದ್ದು ಉಳ್ಳಾಗಡ್ಡಿ ಇದ್ದರು.
