ಪರಿಹಾರದ ಹಣ ಮಂಜೂರಾಗದ ನೆರೆ ಸಂತ್ರಸ್ತರಿಗೆ ಪಿಎಮ್‍ಎವೈ ಯೋಜನೆಯಡಿ ಮನೆಗಳ ಮಂಜೂರಕ್ಕೆ ಯತ್ನ- ಶಾಸಕ ಬಾಲಚಂದ್ರ ಜಾರಕಿಹೊಳಿ.
ಗೋಕಾಕದಲ್ಲಿಂದು ಗೋಕಾಕ ಮತ್ತು ಮೂಡಲಗಿ ತಾಲೂಕುಗಳ ನೆರೆ ಸಂತ್ರಸ್ತರ ಸಭೆ ನಡೆಸಿದ ಶಾಸಕ ಹಾಗೂ ಕೆಎಮ್‍ಎಫ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ.
ಗೋಕಾಕ: ಕಳೆದ ವರ್ಷ ಪ್ರವಾಹದಿಂದ ಮನೆ ಹಾನಿಗೊಳಗಾದ ಪರಿಹಾರದ ಹಣ ಮಂಜೂರ ಆಗದೇ ಇರುವವರಿಗೆ ಪ್ರಧಾನ ಮಂತ್ರಿ ಆವಾಸ ಯೋಜನೆಯಡಿ ಮನೆಗಳನ್ನು ನಿರ್ಮಿಸಲು ಅನುದಾನ ಮಂಜೂರ ಮಾಡಿಸುವುದಾಗಿ ಅರಭಾಂವಿ ಶಾಸಕ ಹಾಗೂ ಕೆಎಮ್‍ಎಫ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ಹೇಳಿದರು.
ಶನಿವಾರದಂದು ನಗರದ ಹೊರವಲಯದಲ್ಲಿರುವ ಬಸವೇಶ್ವರ ಭವನದಲ್ಲಿ ಅರಭಾಂವಿ ಮತಕ್ಷೇತ್ರದ ನೆರೆ ಸಂತ್ರಸ್ತರ ಸಭೆಯನ್ನುದ್ದೇಶಿಸಿ ಮಾತನಾಡಿದ ಅವರು, ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಹಾಗೂ ವಸತಿ ಸಚಿವ ವಿ.ಸೋಮಣ್ಣ ಅವರೊಂದಿಗೆ ಮಾತುಕತೆ ನಡೆಸಿ ಈ ನಿರ್ಣಯಕ್ಕೆ ಬರಲಾಗಿದೆ ಎಂದು ತಿಳಿಸಿದರು.
ಅರಭಾಂವಿ ಹಾಗೂ ಗೋಕಾಕ ಮತಕ್ಷೇತ್ರದಲ್ಲಿಯ ಡಾಟಾ ಎಂಟ್ರಿಯಾಗದೇ ಉಳಿದಿರುವ ಎ.ಬಿ.ಸಿ ಕೆಟಗೇರಿಯ ಒಟ್ಟು 1283 ನೆರೆ ಸಂತ್ರಸ್ತರಿಗೆ ಪರಿಹಾರಧನ ಬಂದಿರುವದಿಲ್ಲ. ಮಹಾಮಾರಿ ಕೊರೋನಾದಿಂದ ರಾಜ್ಯ ಸರ್ಕಾರ ಆರ್ಥಿಕವಾಗಿ ಸುಧಾರಣೆಯಾಗಬೇಕಾಗಿದ್ದು, ಈ ಸಂತ್ರಸ್ತರಿಗೆ ಸರ್ಕಾರದಿಂದ 5ಲಕ್ಷ ರೂಗಳ ಪರಿಹಾರ ನೀಡಲು ಸಾಧ್ಯವಾಗದ ಹಿನ್ನೆಲೆಯಲ್ಲಿ ಅದಕ್ಕಾಗಿ ನಾವು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪನವರು ಹಾಗೂ ವಸತಿ ಸಚಿವರೊಂದಿಗೆ ಸುದೀರ್ಘವಾಗಿ ಚರ್ಚಿಸಿದ ನಂತರ ಪರ್ಯಾಯವಾಗಿ ಈ ಮಾರ್ಗವನ್ನು ಕಂಡುಕೊಳ್ಳಲಾಗಿದೆ ಎಂದು ಹೇಳಿದರು.
ಬಸವ ವಸತಿ ಯೋಜನೆ ಸೇರಿದಂತೆ ಯಾವುದೇ ವಸತಿ ಯೋಜನೆಗಳು ಸದ್ಯದಲ್ಲಿ ಪ್ರಾರಂಭವಾಗುವದಿಲ್ಲ. ಪ್ರಧಾನ ಮಂತ್ರಿ ಆವಾಸ ಯೋಜನೆಯಡಿ ಸಾಮಾನ್ಯ ವರ್ಗದ ಜನರಿಗೆ 1.20 ಲಕ್ಷ, ಎಸ್‍ಸಿ/ಎಸ್‍ಟಿ ಜನಾಂಗದವರಿಗೆ 1.50 ಲಕ್ಷ ರೂ.ಗಳನ್ನು ಮನೆ ನಿರ್ಮಾಣಕ್ಕಾಗಿ ನೀಡಲಾಗುವುದು. ಇದನ್ನು ಮಂಜೂರ ಮಾಡಿಸುವ ಜವಾಬ್ದಾರಿ ನಮ್ಮ ಮೇಲೆ ಇದ್ದು, ಅದನ್ನು ನಾವು ಪ್ರಾಮಾಣಿಕವಾಗಿ ಮಾಡುವುದಾಗಿ ಭರವಸೆ ನೀಡಿದ ಅವರು, ಯಾವುದೇ ಸುಳ್ಳು ವದಂತಿಗಳಿಗೆ ಕಿವಿಗೊಡಬೇಡಿ ಎಂದು ವಿನಂತಿಸಿಕೊಂಡರು.
ಕಳೆದ ವರ್ಷ ಭಾರಿ ಪ್ರಮಾಣದ ನೆರೆಯಿಂದ ಸಾಕಷ್ಟು ತೊಂದರೆಗಳನ್ನು ಅನುಭವಿಸಿದ್ದೀರಿ, ಅಲ್ಲದೇ ಈ ವರ್ಷ ಕೊರೋನಾ ಮಹಾಮಾರಿಯಿಂದ ನೊಂದವರಿಗೆ ಮತ್ತಷ್ಟು ಕಂಟಕ ಎದುರಾಗಿದೆ. ಸರ್ಕಾರದ ವಿವಿಧ ಯೋಜನೆಗಳಿಗಾಗಿ ಯಾವುದೇ ಕಚೇರಿಗಳಿಗೆ ಅಲೆದಾಡದೇ, ನೆರೆ ಸಂತಸ್ತರು ಯಾರಿಗೂ ದುಡ್ಡು ನೀಡಿ ಮೋಸ ಹೋಗಬೇಡಿರಿ. ನಿಮ್ಮ ಬಳಿಗೆ ಈ ಯೋಜನೆ ಹಣವನ್ನು ತಲುಪಿಸುವ ಕಾರ್ಯ ಮಾಡಲಾಗುವುದು. ಈ ದಿಸೆಯಲ್ಲಿ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳು ನೆರೆ ಸಂತಸ್ತರಲ್ಲಿ ಸಾಧ್ಯವಿದ್ದಷ್ಟು ಸಹಕಾರ ನೀಡುವಂತೆ ತಿಳಿಸಿದರು.
ಈ ಸಂದರ್ಭದಲ್ಲಿ ಜಿ.ಪಂ ಸದಸ್ಯ ಗೋವಿಂದ ಕೊಪ್ಪದ, ಮಾಜಿ ಸದಸ್ಯ ರಾಜೇಂದ್ರ ಸಣ್ಣಕ್ಕಿ, ಗೋಕಾಕ ತಹಶೀಲದಾರ ಪ್ರಕಾಶ ಹೊಳೆಪ್ಪಗೋಳ, ತಾ.ಪಂ ಇಓ ಬಸವರಾಜ ಹೆಗ್ಗನಾಯಕ, ಮೂಡಲಗಿ ತಹಶೀಲದಾರ ದಿಲಶಾದ್ ಮಹಾತ, ಬಿಇಓ ಎ.ಸಿ.ಮನ್ನಿಕೇರಿ, ಮುಖಂಡರಾದ ಹಣಮಂತ ತೇರದಾಳ, ಎಮ್.ಕೆ.ಕುಳ್ಳೂರ, ರವಿ ಪರುಶೆಟ್ಟಿ ಸೇರಿದಂತೆ ಅನೇಕರು ಇದ್ದರು.