ಮೂಡಲಗಿಯ ಕಲಾ ಹಾಗೂ ವಾಣಿಜ್ಯ ಮಹಾವಿದ್ಯಾಲಯದಲ್ಲಿ ಸಂವಿಧಾನ ದಿನವನ್ನು ಆಚರಿಸಿದರು.
‘ಸಂವಿಧಾನವು ಪ್ರಜಾಪ್ರಭುತ್ವ ವ್ಯವಸ್ಥೆಗೆ ದಿಕ್ಸೂಚಿಯಾಗಿದೆ’
ಮೂಡಲಗಿ: ‘ಸಂವಿಧಾನವು ಸರ್ಕಾರ ಮತ್ತು ಪ್ರಜಾಪ್ರಭುತ್ವ ವ್ಯವಸ್ಥೆಗೆ ದಿಕ್ಸೂಚಿಯಾಗಿದೆ’ ಎಂದು ಪ್ರೊ. ಎಸ್.ಬಿ. ಖೋತ ಹೇಳಿದರು.
ಇಲ್ಲಿಯ ಕಲಾ ಹಾಗೂ ವಾಣಿಜ್ಯ ಮಹಾವಿದ್ಯಾಲಯದ ರಾಜ್ಯಶಾಸ್ತ್ರ ವಿಭಾಗದಲ್ಲಿ ಆಚರಿಸಿದ ಸಂವಿಧಾನ ದಿನಾಚರಣೆ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿದ ಅವರು ಸಂವಿಧಾನವು ಪ್ರತಿಯೊಬ್ಬ ನಾಗರಿಕರ ಮೂಲಭೂತ ಹಕ್ಕು ಮತ್ತು ಕರ್ತವ್ಯಗಳನ್ನು ತಿಳಿಸಿಕೊಡುತ್ತದೆ ಎಂದರು.
ಅಧ್ಯಕ್ಷತೆವಹಿಸಿದ್ದ ಪ್ರೊ. ಸಂಗಮೇಶ ಗುಜಗೊಂಡ ಮಾತನಾಡಿ ಶಾಸಕಾಂಗ, ಕಾರ್ಯಾಂಗ ಮತ್ತು ನ್ಯಾಯಾಂಗಳ ನಡಾವಳಿಗಳನ್ನು ಸಂವಿಧಾನವು ತಿಳಿಸಿಕೊಟ್ಟು, ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಸಾಕಾರಗೊಳಿಸುತ್ತದೆ ಎಂದರು.
ವಿಶ್ವಕ್ಕೆ ಮಾದರಿಯೆನಿಸುವಂತ ಸಂವಿಧಾನ ರಚಿಸಿರುವ ಡಾ. ಬಿ.ಆರ್. ಅಂಬೇಡ್ಕರ್ ಅವರ ಪರಿಶ್ರಮವು ಶ್ಲಾಘನೀಯವಾಗಿದೆ ಎಂದರು.
ರಾಜ್ಯಶಾಸ್ತ್ರ ಮುಖ್ಯಸ್ಥ ಪ್ರೊ. ಎಸ್.ಎ. ಶಾಸ್ತ್ರೀಮಠ ಪ್ರಾಸ್ತಾವಿಕ ಮಾತನಾಡಿ ದೇಶದ ಪ್ರತಿಯೊಬ್ಬ ಪ್ರಜೆಯು ಸಂವಿಧಾನದ ಬಗ್ಗೆ ಅರಿವು ಇರಬೇಕು. ಸಂವಿಧಾನ ದಿನವನ್ನು ಆಚರಿಸುವ ಮೂಲಕ ಸಂವಿಧಾನದ ಮಹತ್ವವನ್ನು ಜನರಲ್ಲಿ ತಿಳಿಸುವುದಾಗಿದೆ ಎಂದರು.
ಪ್ರೊ. ಜಿ.ವಿ. ನಾಗರಾಜ, ಪ್ರೊ. ವಿ.ಎಸ್. ಹಂಪಣ್ಣವರ, ಭಾರತಿ ತಳವಾರ ಮತ್ತು ವಿದ್ಯಾರ್ಥಿಗಳು ಭಾಗವಹಿಸಿದ್ದರು.
ಪ್ರೊ. ಎ.ಪಿ. ರಡ್ಡಿ ನಿರೂಪಿಸಿದರು.