ಆರ್ಥಿಕತೆಗೆ ಚೈತನ್ಯ ತುಂಬಲು ಬಜೆಟ್ ಸಹಕಾರಿ, ಜನಹಿತದ ಬಜೆಟ್ : ಕೆಎಂಎಫ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ಶ್ಲಾಘನೆ
ಪೇಪರ್‍ಲೆಸ್ ಬಜೆಟ್ ಮಂಡಿಸಿರುವ ಖ್ಯಾತಿ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಸಲ್ಲುತ್ತದೆ.
ಗೋಕಾಕ : ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಮಂಡಿಸಿರುವ ಕೇಂದ್ರ ಬಜೆಟ್ ಬಗ್ಗೆ ಕೆಎಂಎಫ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ಅವರು ಪ್ರಶಂಸೆ ವ್ಯಕ್ತಪಡಿಸಿದ್ದು, ಸಮಾಜದ ಪ್ರತಿಯೊಬ್ಬರಿಗೂ ಈ ಬಜೆಟ್ ಸಹಕಾರಿಯಾಗಿದೆ ಎಂದು ಶ್ಲಾಘಿಸಿದ್ದಾರೆ.
ಕೃಷಿ ಹಾಗೂ ರೈತರನ್ನು ಗಮನದಲ್ಲಿಟ್ಟುಕೊಂಡು ಬಜೆಟ್ ಮಂಡಿಸಲಾಗಿದೆ. ರೈತರ ಅಭಿವೃದ್ಧಿ ಅದು ಕೇಂದ್ರದಿಂದ ಮಾತ್ರ ಸಾಧ್ಯವಿದ್ದು, ಎಲ್ಲ ನಾಗರೀಕರಿಗೂ ಅನುಕೂಲವಾಗುವ ನಿಟ್ಟಿನಲ್ಲಿ ಜನಪರ ಹಾಗೂ ರೈತಪರ ಬಜೆಟ್ ಇದಾಗಿದೆ ಎಂದು ಅವರು ಹೇಳಿದ್ದಾರೆ.
ಆರ್ಥಿಕತೆಗೆ ಚೈತನ್ಯ ತುಂಬಲು ಇನ್ನೂ ಎರಡು ಆತ್ಮನಿರ್ಭರ ಪ್ಯಾಕೇಜ್ ಘೋಷಿಸಲಾಗಿದೆ. ಭಾರತದ ಆತ್ಮವಿಶ್ವಾಸವನ್ನು ಈ ಬಜೆಟ್ ಇಡೀ ಪ್ರಪಂಚಕ್ಕೆ ತೋರಿಸಿಕೊಟ್ಟಿದೆ. ಕೊರೋನಾ ಮಹಾಮಾರಿ ಇಡೀ ಮನುಕುಲವನ್ನೇ ಬೆಚ್ಚಿ ಬೀಳಿಸಿದ್ದು, ಇದರ ನಿರ್ಮೂಲನೆಗಾಗಿ 35 ಸಾವಿರ ಕೋಟಿ ರೂ. ಹಣವನ್ನು ತೆಗೆದಿರಿಸಲಾಗಿದೆ. ಸ್ವಾವಲಂಬನೆಯ ದೃಷ್ಟಿಕೋನವನ್ನು ಹೊಂದಿದ್ದು ನಿರ್ಮಲಾ ಸೀತಾರಾಮನ್ ಅವರು ಮಂಡಿಸಿರುವ ಬಜೆಟ್ ಆಶಾದಾಯಕವಾಗಿದೆ. ಪ್ರತಿಯೊಂದು ಕ್ಷೇತ್ರಗಳಿಗೆ ಹೆಚ್ಚಿನಾಧ್ಯತೆ ನೀಡಲಾಗಿದೆ. ಸಿಲಿಕಾನ್ ಸಿಟಿಗೆ ಮತ್ತೆರಡು ಹೊಸ ಮಾರ್ಗಗಳಿಗೆ ಘೋಷಣೆ ಮಾಡಲಾಗಿದ್ದು ಎಲ್ಲ ವರ್ಗಗಳ ಹಿತವನ್ನು ಸಹ ಗಮನದಲ್ಲಿಟ್ಟುಕೊಂಡು ಬಜೆಟ್ ಮಂಡಿಸಲಾಗಿದೆ ಎಂದು ಹೇಳಿದ್ದಾರೆ.
ಗ್ರಾಮೀಣ ಮೂಲಸೌಕರ್ಯಕ್ಕೆ 40 ಸಾವಿರ ಕೋಟಿ ರೂ. ನಿಗದಿಪಡಿಸಲಾಗಿದ್ದು, ಕೃಷಿಕರ ಸಾಲಕ್ಕಾಗಿ 16500 ಕೋಟಿ ರೂ.ಗಳನ್ನು ತೆಗೆದಿರಿಸಲಾಗಿದೆ. 43 ಕೋಟಿ ರೈತರಿಗೆ ಕನಿಷ್ಠ ಬೆಂಬಲ ಬೆಲೆಯಿಂದ ಲಾಭವಾಗಲಿದೆ. ಜನಸಾಮಾನ್ಯರ ಬಜೆಟ್ ಇದಾಗಿದ್ದು, ಜನಹಿತದ ಬಜೆಟ್ ಜೊತೆಗೆ ಅನ್ನದಾತನ ರಕ್ಷಕ ಬಜೆಟ್ ಎಂದು ಶ್ಲಾಘಿಸಿರುವ ಶಾಸಕ ಬಾಲಚಂದ್ರ ಜಾರಕಿಹೊಳಿ ಅವರು ದೇಶದಲ್ಲಿ ಪ್ರಪ್ರಥಮ ಬಾರಿಗೆ ಪೇಪರ್‍ಲೆಸ್ ಬಜೆಟ್ ಮಂಡಿಸಿರುವ ಖ್ಯಾತಿ ಸಚಿವೆ ನಿರ್ಮಲಾ ಸೀತಾರಾಮನ್‍ಗೆ ಸಲ್ಲುತ್ತದೆ ಎಂದು ಹೇಳಿದ್ದಾರೆ.