ಬೆಟಗೇರಿ:ಗೋಕಾಕ ತಾಲೂಕಿನ ಬೆಟಗೇರಿ ಗ್ರಾಮ ಪಂಚಾಯತಿ ಅಧ್ಯಕ್ಷ, ಉಪಾಧ್ಯಕ್ಷರ ಆಯ್ಕೆಗಾಗಿ ಸೋಮವಾರದಂದು ನಡೆದ ಚುನಾವಣೆಯಲ್ಲಿ ಅಧ್ಯಕ್ಷರಾಗಿ ಬಸವ್ವ ದೇಯಣ್ಣವರ, ಉಪಾಧ್ಯಕ್ಷರಾಗಿ ಬಸವಂತ ಕೋಣಿ ಅವಿರೋಧವಾಗಿ ಆಯ್ಕೆಗೊಂಡಿದ್ದಾರೆ.
ಸ್ಥಳೀಯ ಗ್ರಾಪಂ ಅಧ್ಯಕ್ಷ ಸ್ಥಾನಕ್ಕೆ ಸಾಮಾನ್ಯ ಮಹಿಳೆ ಹಾಗೂ ಉಪಾಧ್ಯಕ್ಷ ಸ್ಥಾನಕ್ಕೆ ಸಾಮಾನ್ಯ ಸ್ಥಾನ ಮಿಸಲಾತಿ ಇದ್ದ ಕಾರಣ ಈ ಎರಡು ಸ್ಥಾನಕ್ಕೆ ಒಂದೊಂದು ನಾಮಪತ್ರ ಸಲ್ಲಿಕೆಯಾಗಿದ್ದರಿಂದ ಉಭಯ ಸ್ಥಾನದ ಅಭ್ಯರ್ಥಿಗಳು ಅವಿರೋಧವಾಗಿ ಆಯ್ಕೆಯಾಗಿದ್ದಾರೆ ಎಂದು ಚುನಾವಣಾಧಿಕಾರಿ ವಿ.ಸಿ.ಪತ್ತಾರ ತಿಳಿಸಿದ್ದಾರೆ.
ಈ ವೇಳೆ ಬಸವರಾಜ ಪಣದಿ ಮಾತನಾಡಿ, ಗ್ರಾಪಂ ನೂತನ ಅಧ್ಯಕ್ಷ, ಉಪಾಧ್ಯಕ್ಷರು ಎಲ್ಲ ಸದಸ್ಯರನ್ನು ವಿಶ್ವಾಸಕ್ಕೆ ತೆಗೆದುಕೊಂಡು, ಎಲ್ಲರೂ ಒಂದಾಗಿ ಗ್ರಾಮದ ಸಮಗ್ರ ಅಭಿವೃದ್ಧಿಯತ್ತ ಗಮನಹರಿಸಿ, ಮಾದರಿ ಗ್ರಾಮವನ್ನಾಗಿ ಮಾಡಲು ಪ್ರಯತ್ನಿಸಬೇಕು ಎಂದರು.
ನೂತನ ಉಪಾಧ್ಯಕ್ಷ ಬಸವಂತ ಕೋಣಿ ಮಾತನಾಡಿ, ಅಧ್ಯಕ್ಷ-ಉಪಾಧ್ಯಕ್ಷರ ಸ್ಥಾನಕ್ಕೆ ನಮ್ಮನ್ನು ಅವಿರೋಧ ಆಯ್ಕೆ ಮಾಡಿದ ಎಲ್ಲ 11 ಜನ ಸದಸ್ಯರಿಗೆ ಅಭಿನಂದನೆ. ಊರಿನ ಅಭಿವೃದ್ಧಿಗೆ ಪ್ರಾಮಾಣಿಕವಾಗಿ ಶ್ರಮಿಸುವುದಾಗಿ ಹೇಳಿದರು.
ಗ್ರಾಪಂ ಆಡಳಿತಾಧಿಕಾರಿ ವಿ.ಸಿ.ಪತ್ತಾರ ಹಾಗೂ ನೂತನ ಗ್ರಾಪಂ ಅಧ್ಯಕ್ಷ, ಉಪಾಧ್ಯಕ್ಷರನ್ನು ಹೂ ಮಾಲೆ ಹಾಕಿ ಸತ್ಕರಿಸಲಾಯಿತು. ನೂತನ ಗ್ರಾಪಂ ಸದಸ್ಯ, ವಕೀಲ ಬಸವರಾಜ ದಂಡಿನ ಮಾತನಾಡಿದರು.
ಪಿಡಿಒ ಎಚ್.ಎನ್.ಬಾವಿಕಟ್ಟಿ, ತಾಪಂ ಸದಸ್ಯ ಲಕ್ಷ್ಮಣ ನೀಲಣ್ನವರ, ಮಾಜಿ ಗ್ರಾಪಂ ಅಧ್ಯಕ್ಷರಾದ ಲಕ್ಷ್ಮಣ ಚಂದರಗಿ, ಈಶ್ವರ ಬಳಿಗಾರ, ಸುಭಾಷ ಜಂಬಗಿ, ಸುಭಾಷ ಕರೆಣ್ಣವರ, ಕುಲಗೋಡ ಪೊಲೀಸ್ ಠಾಣೆ ಪಿಎಸ್‍ಐ ಹನುಮಂತ ನರಳೆ, ಎಸ್.ಎಚ್.ಕರನಿಂಗ, ಎಸ್.ಎಸ್.ವಜ್ರಮಟ್ಟಿ, ಎ.ಕೆ.ನಾಡಗೌಡ್ರ, ಡಿ.ಎಸ್.ಬೆಕ್ಕೇರಿ, ಮಲ್ಲಿಕಾರ್ಜುನ ಮೆಳೆಣ್ಣವರ, ಚಂದ್ರಶೇಖರ ನೀಲಣ್ಣವರ, ಈರಪ್ಪ ಬಳಿಗಾರ, ಗ್ರಾಪಂ ಕಾರ್ಯದರ್ಶಿ ಗೌಡಪ್ಪ ಮಾಳೇದ ಸೇರಿದಂತೆ ನೂತನ ಗ್ರಾಪಂ ಸದಸ್ಯರು, ಗಣ್ಯರು, ರಾಜಕೀಯ ಮುಖಂಡರು, ಇತರರು ಇದ್ದರು.
