ಫೆ. 7 ರಂದು ಬೆಂಗಳೂರಿನಲ್ಲಿ ” ಎಸ್.ಟಿ. ಮೀಸಲಾತಿಗಾಗಿ ಕುರುಬರ ಜಾಗೃತಿ ಸಮಾವೇಶ
ಮೂಡಲಗಿ: ಕುರುಬ ಸಮಾಜವು ಶೈಕ್ಷಣಿಕವಾಗಿ ಆರ್ಥಿಕವಾಗಿ ಔದ್ಯೋಗಿಕವಾಗಿ ಹಾಗೂ ರಾಜಕೀಯವಾಗಿಯೂ ಹಿಂದುಳಿದಿದೆ. ಇಂದಿಗೂ ಸಹ ಅಲೆಮಾರಿ ಜೀವನ ನಡೆಸುತ್ತಿರುವ, ಬುಡಕಟ್ಟು ಸಂಸ್ಕøತಿಗಳನ್ನು ಆಚರಿಸುತ್ತಾ ಜೀವನ ಸಾಗಿಸುತ್ತಿದ್ದಾರೆ. ಪ್ರಜಾಪ್ರಭುತ್ವ ರಾಷ್ಟ್ರದಲ್ಲಿ ಮೀಸಲಾತಿಯು ಪ್ರಜೆಗಳ ಹಕ್ಕು. ಭಾರತ ದೇಶದಲ್ಲಿ ಹಲವು ರಾಜ್ಯಗಳಲ್ಲಿ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡಗಳ ಪಟ್ಟಿಯಲ್ಲಿದ್ದರೂ ಸಹ ಕರ್ನಾಟಕದಲ್ಲಿ ಕುರುಬ ಸಮುದಾಯ ಮೀಸಲಾತಿಯಿಂದ ವಂಚಿತವಾಗಿದೆ ಎಂದು ಹಾಲುಮತ ಮಹಾ ಸಭಾ ಸಂಚಾಲಕ ವೀರು ಮೋಡಿ ಮೌರ್ಯ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಅವರು ಗುರುವಾರ ನೀಡಿರುವ ಪ್ರಕಟಣೆಯಲ್ಲಿ ಭಾರತ ದೇಶದಲ್ಲಿ ಬುಡಕಟ್ಟು ಜನಾಂಗವಾಗಿರುವ ಕುರುಬ ಸಮುದಾಯವು ಬ್ರಿಟಿಷರ ಆಳ್ವಿಕೆಯಲ್ಲೂ ಸಹ ಪರಿಶಿಷ್ಟ ಪಂಗಡ (ಎಸ್.ಟಿ) ಮೀಸಲಾತಿ ಪಟ್ಟಿಯಲ್ಲಿದೆ. ಕರ್ನಾಟಕ ರಾಜ್ಯದಲ್ಲಿಯೂ ಸಹ ಜೇನು ಕುರುಬ, ಕಾಡು ಕುರುಬ, ಗೊಂಡ, ರಾಜಗೊಂಡ ಮತ್ತು ಕುರುಬ (ಕೊಡಗು ಜಿಲ್ಲೆ) ಪರಿಶಿಷ್ಟ ಪಂಗಡ ಪಟ್ಟಿಯಲ್ಲಿದೆ.ಈ ಸೌಲಭ್ಯ ಕೆಲವೇ ಜಿಲ್ಲೆಗಳಿಗೆ ಮಾತ್ರ ಸೀಮಿತಗೊಳಿಸಲಾಗಿದೆ.
ದಶಕಗಳಿಂದ ಕುರುಬ ಸಮಾಜಕ್ಕಾಗಿರುವ ಅನ್ಯಾಯವನ್ನು ಸರಿಪಡಿಸುವಂತೆ ರಾಜ್ಯ ಮತ್ತು ಕೇಂದ್ರ ಸರ್ಕಾರಗಳಿಗೆ ಒತ್ತಾಯಿಸಿ,ಶ್ರೀ ಕಾಗಿನೆಲೆ ಮಹಾಸಂಸ್ಥಾನ ಕನಕಗುರುಪೀಠದ ಜಗದ್ಗುರುಗಳು ಶ್ರೀಶ್ರೀಶ್ರೀ ನಿರಂಜನಾನಂದಪುರಿ ಮಹಾಸ್ವಾಮಿಜಿಗಳು ಹಾಗೂ ಸಮಾಜದ ಪರಮಪೂಜ್ಯರುಗಳು ಜ. 15 ರಿಂದ ಶ್ರೀಕ್ಷೇತ್ರ ಕಾಗಿನೆಲೆಯಿಂದ ಬೆಂಗಳೂರಿನವರೆವಿಗೂ ಪಾದಯಾತ್ರೆಯ ಮೂಲಕ ಕುರುಬರ ಜಾಗೃತಿ ಸಭೆಗಳನ್ನು ನಡೆಸಿದ್ದಾರೆ. ಫೆ. 7 ರವಿವಾರದಂದು ಬೆಂಗಳೂರಿನ ತುಮಕೂರು ರಸ್ತೆಯ ಮಾದಾವರದಲ್ಲಿರುವ ಇಂಟರ್‍ನ್ಯಾಷನಲ್ ಎಕ್ಸಿಬ್ಯೂಷನ್ ಮೈದಾನದಲ್ಲಿ ಅಖಂಡ ಕರ್ನಾಟಕದ ಕುರುಬ ಸಮಾಜದ ಒಕ್ಕೊರಲ ಧ್ವನಿ “ಕುರುಬರ ಜಾಗೃತಿ ಸಮಾವೇಶ” ಜರುಗಲಿದೆ. ಐತಿಹಾಸಿಕ ಸಮಾವೇಶದಲ್ಲಿ ಕರ್ನಾಟಕ ರಾಜ್ಯದ 30 ಜಿಲ್ಲೆಗಳಿಂದಲೂ ಸಮಾಜ ಬಂಧುಗಳು ಭಾಗವಹಿಸಬೇಕೆಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.