ಮೂಡಲಗಿ: ಕೋವಿಡ್-19 ನ ಕಾಲಘಟ್ಟದಲ್ಲಿ ಭಾರತೀಯ ವೈದ್ಯರ ಕಾರ್ಯಕ್ಷಮತೆ ಜಗತ್ತಿಗೆ ಮಾದರಿಯಾಗಿದೆ. ಕೇಂದ್ರ ಸರ್ಕಾರದ ಕಾರ್ಯಸೂಚಿಗಳ ಅನ್ವಯ ನಮ್ಮ ದೇಶದ ಜನರ ಸೇವೆಗಾಗಿ ಅವಿರತವಾಗಿ ಶ್ರಮಿಸಿ ಯೋಧರಂತೆ ನಮ್ಮೆಲ್ಲರನ್ನು ರಕ್ಷಿಸಿ ವೈದ್ಯೋನಾರಾಯಣ ಹರಿ ಎಂಬ ಯುಕ್ತಿಯನ್ನು ನಮ್ಮ ದೇಶದ ವೈಧ್ಯರು ನಿಜಗೊಳಿಸಿದ್ದಾರೆ ಎಂದು ಬಿ.ಡಿ.ಸಿ.ಸಿ ಬ್ಯಾಂಕ್ ನಿರ್ದೇಶಕ ಸತೀಶ ಕಡಾಡಿ ಹೇಳಿದರು.
ಕಲ್ಲೋಳಿ ಪಟ್ಟಣದ ಶ್ರೀ ಸತ್ಯಸಾಯಿ ಮಂದಿರದಲ್ಲಿ ಶನಿವಾರ (ಫೆ-13) ರಂದು ಸೇವಾ ಸಾಮಾಜಿಕ, ಆರ್ಥಿಕ ಮತ್ತು ಕಲ್ಯಾಣ ಸಂಸ್ಥೆ, ಶ್ರೀ ಗುರುದತ್ತ ಸೇವಾ ಸಂಘ ಕರ್ನಾಟಕ ಹಾಗೂ ವೆಂಕಟೇಶ ಆಸ್ಪತ್ರೆ ಮೂಡಲಗಿ ಇವುಗಳ ಸಂಯುಕ್ತಾಶ್ರಯದಲ್ಲಿ ನಡೆದ ಉಚಿತ ಆರೋಗ್ಯ ತಪಾಸಣಾ ಶಿಬಿರವನ್ನು ದೀಪ ಬೆಳಗಿಸುವ ಮೂಲಕ ಚಾಲನೆ ನೀಡಿ ಮಾತನಾಡಿದ ಅವರು ಗ್ರಾಮೀಣ ಭಾಗಗಳಲ್ಲಿ ಆರೋಗ್ಯ ತಪಾಸಣಾ ಶಿಬಿರಗಳನ್ನು ಇನ್ನೂ ಹೆಚ್ಚು ಆಯೋಜಿಸುವ ಮೂಲಕ ಗ್ರಾಮೀಣ ಭಾಗದ ಜನರಿಗೆ ಆರೋಗ್ಯ ಸೇವೆಯನ್ನು ನೀಡುವುದರ ಜೊತೆಗೆ ಗ್ರಾಮೀಣ ಜನರಿಗೆ ಸದೃಢ ಆರೋಗ್ಯ ಕಾಯ್ದುಕೊಳ್ಳುವ ಮುಂಜಾಗ್ರತ ಕ್ರಮಗಳ ಬಗ್ಗೆಯೂ ತಿಳಿಸುವುದರ ಮೂಲಕ ಆರೋಗ್ಯಯುತ ದೇಶ ಕಟ್ಟುವ ಕಾರ್ಯಕ್ಕೆ ವೈದ್ಯರು ಮುಂದಾಗಬೇಕು ಎಂದು ಸಲಹೆ ನೀಡಿದರು.
ಸಂಘ ಸಂಸ್ಥೆಗಳ ಜೊತೆಗೂಡಿ ಪಟ್ಟಣದ ಯುವಕರು ಇಂತಹ ಸಮಾಜಮುಖಿ ಕಾರ್ಯಕ್ರಮಗಳನ್ನು ಆಯೋಜಿಸುವ ಮೂಲಕ ನಿಸ್ವಾರ್ಥದಿಂದ ಸೇವೆ ಸಲ್ಲಿಸುವ ಮೂಲಕ ಸಮಾಜದ ಋಣವನ್ನು ತೀರಿಸೋಣ ಎಂದರು. ಶಿಬಿರದಲ್ಲಿ ಬಿ.ಪಿ, ಸಕ್ಕರೆ ಕಾಯಿಲೆ, ಹೃದಯ ಮತ್ತು ಶ್ವಾಸಕೋಶ ಸಂಬಂಧಿತ ಸೇರಿದಂತೆ ಅನೇಕ ಕಾಯಿಲೆಗಳ ತಪಾಸಣೆಯನ್ನು ಡಾ. ವೀಣಾ ಕನಕರೆಡ್ಡಿ, ಡಾ.ಎಸ್.ಎಮ ಕರಿಗಾರ ನಡೆಸಿಕೊಟ್ಟರು.
ಸಾಯಿ ಸಮಿತಿ ಜಿಲ್ಲಾ ಸಂಚಾಲಕ ಸುರೇಶ ಕಬ್ಬೂರ ಅಧ್ಯಕ್ಷತೆ ವಹಿಸಿದ್ದರು, ಅತಿಥಿಗಳಾಗಿ ಸೇವಾ ಸಂಸ್ಥೆಯ ಅಧ್ಯಕ್ಷ ಬಸವರಾಜ ಕಡಾಡಿ, ರಾವಸಾಹೇಬ ಬೆಳಕೂಡ, ಡಾ. ಪ್ರಿಯಾಂಕ ಪಾಟೀಲ, ಶ್ರೀಶೈಲ ತುಪ್ಪದ, ದತ್ತು ಕಲಾಲ, ಅಜೀತ ಚಿಕ್ಕೋಡಿ, ಬಸವರಾಜ ಭಜಂತ್ರಿ, ರಾಮು ಮುಂಡಿಗನಾಳ, ಪರಪ್ಪ ಗಿರೆಣ್ಣವರ, ಮಂಜುಳಾ ಹಿರೇಮಠ ಸೇರಿದಂತೆ ಕಲ್ಲೋಳಿ ಪಟ್ಟಣದ ಅನೇಕ ಹಿರಿಯರು ಹಾಗೂ ಆಶಾ ಕಾರ್ಯಕರ್ತೆಯರು ಉಪಸ್ಥಿತರಿದ್ದರು. ರಾಜೇಶ ಹಂಜಿ ಸ್ವಾಗತಿಸಿದರು, ಆನಂದ ಚಿಕ್ಕೋಡಿ ಕಾರ್ಯಕ್ರಮ ನಿರೂಪಿಸಿದರೂ, ಹಣಮಂತ ಕೌಜಲಗಿ ವಂದಿಸಿದರು
