ಮೂಡಲಗಿಯ ಮಾಧ್ಯಮ ಕಚೇರಿಯಲ್ಲಿ ಶನಿವಾರ ಕರೆದಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾಜಿ ಕೇಂದ್ರ ಸಚಿವ ಬಾಬಾಗೌಡ ಪಾಟೀಲ ಮಾತನಾಡಿದರು
ಮಾಜಿ ಸಚಿವ ಬಾಬಾಗೌಡ ಪಾಟೀಲ ವಾಗ್ದಾಳಿ
ರೈತ ವಿರೋಧಿ ಬಿಜೆಪಿ ಪಕ್ಷವನ್ನು ಸೋಲಿಸುವ ಪಣ
ಮೂಡಲಗಿ: ‘ಕೇಂದ್ರ ಸರ್ಕಾರವು ರೈತ ವಿರೋಧಿ ಮೂರು ಮಸೂಧಿಗಳನ್ನು ಜಾರಿ ತಂದು ಸರ್ವಾಧಿಕಾರವನ್ನು ಮರೆದಿರುವುದನ್ನು ರೈತರೆಲ್ಲರೂ ತೀವ್ರವಾಗಿ ಖಂಡಿಸುತ್ತೇವೆ’ ಎಂದು ಕೇಂದ್ರ ಮಾಜಿ ಸಚಿವ ಬಾಬಾಗೌಡ ಪಾಟೀಲ ಹೇಳಿದರು.
ಶನಿವಾರ ಮಾಧ್ಯಮ ಕಚೇರಿಯಲ್ಲಿ ಕರೆದಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ಲೋಕಸಭಾ ಉಪಚುನಾವಣೆಯಲ್ಲಿ ರೈತರೆಲ್ಲ ಬಿಜೆಪಿಯ ವಿರುದ್ಧ ಮತ ಚಲಾಯಿಸಿ ರೈತರ ಶಕ್ತಿ ಏನೆಂಬುದನ್ನು ತೋರಿಸುತ್ತೇವೆ, ಬಿಜೆಪಿ ಸೋಲಿಸುವುದು ರೈತರ ಪಣವಾಗಿದೆ ಎಂದರು.
ರಾಜ್ಯಸರ್ಕಾರವನ್ನು ಗಮನಕ್ಕೆ ತರದೆ, ಲೋಕಸಭೆಯಲ್ಲಿ ಸರಿಯಾಗಿ ಚರ್ಚೆ ಮಾಡದೆ ಕೊರೊನಾ ಆತಂಕದಲ್ಲಿ ಕೃಷಿ ಮಸೂದೆಗಳನ್ನು ಜಾರಿಗೆ ತರುವ ಮೂಲಕ ತಾನು ಮಾಡಿದ್ದೆ ಸರಿ ಎನ್ನುವ ಮೋದಿ ಅವರ ಧೋರಣೆಯು ಖಂಡನೀಯವಾಗಿದೆ ಎಂದು ದೂರಿದರು.
ರೈತರು ಬೆಳೆದ ಬೆಳೆಗೆ ಕನಿಷ್ಠ ಬೆಂಬಲ ಬೆಲೆ ನೀಡುವ ಬಗ್ಗೆ ಯಾವದೇ ಕಾನೂನು ಜಾರಿಗೆ ಮಾಡಲಿಲ್ಲ. ರೈತರ ಕಾಯಕಕ್ಕೆ ಸಂಕಷ್ಟ ತಂದಿರುವ ಬಿಜೆಪಿಯು ರೈತ ವಿರೋಧಿಯಾಗಿದ್ದು. ರೈತರೆಲ್ಲ ಒಗ್ಗಟ್ಟಾಗಿದ್ದು ಉಪ ಚುನಾವಣೆಯಲ್ಲಿ ಬಿಜೆಪಿ ವಿರೋಧ ಮತ ಚಲಾಯಿಸುವ ಮೂಲಕ ಮೋದಿ ಅವರಿಗೆ ಉತ್ತರಿಸುತ್ತೇವೆ ಎಂದರು.
ತಾವು ಬಿಜೆಪಿ ಪಕ್ಷಕದಲ್ಲಿದ್ದಾಗ ಅಟಲ್‍ಬಿಹಾರಿ ವಾಜಪೇಯಿ ಅವರ ಬಿಜೆಪಿ ಜನಪರ ಇತ್ತು ಈಗ ಮೋದಿ ಅವರ ಬಿಜೆಪಿಯು ಕೇವಲ ಬಂಡವಳಾಶಾಯಿಗಳ ಕಪಿಮುಷ್ಟಿಯಲ್ಲಿದೆ. ಪೆಟ್ರೋಲ್, ಡಿಸೈಲ್ ಬೆಲೆ, ರಸಗೊಬ್ಬರ ಬೆಲೆ ಗಗನಕ್ಕೆ ಏರಿದೆ ಎಂದು ಹರಿಹಾಯ್ದರು.
ಬಿಜೆಪಿ ವಿರೋಧಿಸುವ ತಾವು ಯಾವ ಪಕ್ಷಕ್ಕೆ ರೈತರೆಲ್ಲ ಮತ ಚಲಾಯಿಸುವ ಬಗ್ಗೆ ನಿರ್ಧರಿಸಿರುವಿರಿ ಎಂದು ಪತ್ರಕರ್ತರು ಕೇಳಿದ ಪ್ರಶ್ನೆಗೆ ಕಾಂಗ್ರೆಸ್ ಪಕ್ಷದ ಸತೀಶ ಜಾರಕಿಹೊಳಿ ಅವರಿಗೆ ರೈತರೆಲ್ಲ ಮತ ಚಲಾಯಿಸುತ್ತೇವೆ ಎಂದು ಸ್ಪಷ್ಟಪಡಿಸಿದರು.
ಸಿಐಟಿಯು ಜಿಲ್ಲಾಧ್ಯಕ್ಷ ವಿ.ಪಿ. ಕುಲಕರ್ಣಿ, ಭಾರತೀಯ ಕೃಷಿಕ ಸಮಾಜದ ರಾಜ್ಯಾಧ್ಯಕ್ಷ ಸಿದ್ದುಗೌಡ ಮೋದಗಿ ಮಾತನಾಡಿ ಬಿಜೆಪಿ ಪಕ್ಷವನ್ನು ಸೋಲಿಸುವ ಮೂಲಕ ದೇಶಕ್ಕೆ ಬೆಳಗಾವಿ ಲೋಕಸಭಾ ಚುನಾವಣೆಯ ಮೂಲಕ ಸಂದೇಶ ಕೊಡಬೇಕಾಗಿದೆ. ಕೇಂದ್ರಕ್ಕೆ ಬಿಸಿ ಮುಟ್ಟಿಸಬೇಕಾಗಿದೆ. ರೈತರೆಲ್ಲ ಕಾಂಗ್ರೆಸ್ ಪಕ್ಷಕ್ಕೆ ಮತ ಚಲಾಯಿಸಿ ಎಂದರು.
ವಕೀಲ ನಾಗೇಶ ಸಾತೇರಿ, ಸಿಐಟಿಯು ಜಿಲ್ಲಾ ಮುಖಂಡರು ಮತ್ತಿರರು ಇದ್ದರು.