ಬೆಟಗೇರಿ:ಕರೋನಾ ಮಹಾಮಾರಿಯನ್ನು ಮಟ್ಟಹಾಕುವ ನಿಟ್ಟಿನಲ್ಲಿ ರಾಜ್ಯಾದ್ಯಂತ ವಾರಾಂತ್ಯ ಕಫ್ರ್ಯೂ ಜಾರಿಯಾದ ಹಿನ್ನಲೆಯಲ್ಲಿ ಶನಿವಾರ ಏ.24 ರಂದು ಬೆಟಗೇರಿ ಗ್ರಾಮದಲ್ಲಿ ಕೇವಲ ಆಸ್ಪತ್ರೆ, ಔಷಧ ಮಳಿಗೆಗಳು ಹೊರತುಪಡಿಸಿ, ಅಂಗಡಿ-ಮುಂಗಟ್ಟುಗಳನ್ನು ಬಾಗಿಲು ತೆರೆಯದೇ ಸಂಪೂರ್ಣ ಬಂದ್ ಮಾಡಲಾಗಿತ್ತು. ಎಲ್ಲ ಬೀದಿಗಳು, ಪ್ರಮುಖ ಸ್ಥಳಗಳು ಸಹ ಬೀಕೂ ಎನ್ನುತ್ತಿದ್ದವು.
ಸ್ಥಳೀಯ ಗ್ರಾಮ ಪಂಚಾಯತಿ ಸಿಬ್ಬಂದಿ ಹಾಗೂ ಕುಲಗೋಡ ಪೊಲೀಸ್ ಠಾಣೆ ಪೊಲೀಸ್ ರ ನೇತೃತ್ವದಲ್ಲಿ ಇಲ್ಲಿಯ ಪ್ರಮುಖ ಬೀದಿ, ಸ್ಥಳಗಳಲ್ಲಿ ಮಾಸ್ಕ್ ಇಲ್ಲದೇ ಓಡಾಡುವ ಹಲವು ಜನರಿಗೆ ದಂಡದ ಬಿಸಿ ಮುಟ್ಟಿಸಿ, 50, 100 ರೂಪಾಯಿ ಹಣ ವಸೂಲಿ ಮಾಡಿ, ಮಾಸ್ಕ್ ಇಲ್ಲದವರಿಗೆ ಮಾಸ್ಕ್ ನೀಡಿ, ಕರೊನಾ ತಡೆಗಟ್ಟುವ ನಿಟ್ಟಿನಲ್ಲಿ ಮುನ್ನಚ್ಚರಿಕೆ ನಿಯಮಗಳ ಕುರಿತು ತಿಳುವಳಿಕೆ ಮೂಡಿಸುವ ದೃಶ್ಯ ಇಂದು ಕಂಡು ಬಂದಿತು.
ರವಿವಾರ ಸಂತೆ ರದ್ದು: ರವಿವಾರವೂ ಸಹ ವಾರಂತ್ಯದ ಕಫ್ರ್ಯೂ ಜಾರಿಯಲ್ಲಿರುವುದರಿಂದ ಬೆಟಗೇರಿ ಗ್ರಾಮದಲ್ಲಿ ಏ.25ರಂದು ನಡೆಯಬೇಕಿದ್ದ ವಾರದ ಭಾನುವಾರ ಸಂತೆಯನ್ನು ಸಂಪೂರ್ಣ ರದ್ದುಗೊಳಿಸಲಾಗಿದೆ. ಗ್ರಾಮದ ಹಾಗೂ ಸುತ್ತಲಿನ ಹತ್ತೂರಿನ ನಾಗರಿಕರು, ರೈತರು, ಅಂಗಡಿ-ಮುಂಗಟ್ಟು ವ್ಯಾಪಾರಸ್ಥರು ರವಿವಾರ ಸಂತೆಗೆ ಬರದೇ ಸಹಕರಿಸಬೇಕು ಎಂದು ಸ್ಥಳೀಯ ಗ್ರಾಪಂ ಪಿಡಿಒ ಎಚ್.ಎನ್.ಬಾವಿಕಟ್ಟಿ, ಹಿರಿಯ ನಾಗರಿಕರು ಪತ್ರಿಕಾ ಪ್ರಕಟನೆ ಮೂಲಕ ಕೋರಿದ್ದಾರೆ.
