ಕೋವಿಡ್ ಸೊಂಕಿತರಿಗೆ ಉಚಿತವಾಗಿ ಕೆಎಂಎಫ್‍ನಿಂದ 200 ಆಕ್ಸಿಜನ್ ಬೆಡ್‍ಗಳ ಪೂರೈಕೆ : ಕೆಎಂಎಫ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ
ತಿಂಗಳೊಳಗೆ ಕೋಟಿ ರೂ. ವೆಚ್ಚದಲ್ಲಿ ಆಕ್ಸಿಜನ್ ಬೆಡ್‍ಗಳ ವ್ಯವಸ್ಥೆ – ಕೆಎಂಎಫ್ ಸಭೆಯಲ್ಲಿ ಬಾಲಚಂದ್ರ ಜಾರಕಿಹೊಳಿ ಹೇಳಿಕೆ
ಬೆಂಗಳೂರು : ಕೋವಿಡ್ ಎರಡನೇ ಅಲೆಯನ್ನು ಕರಾಳಗೊಳಿಸಿರುವ ಆಕ್ಸಿಜನ್ ಕೊರತೆ ಜನರ ಉಸಿರುಗಟ್ಟಿಸುತ್ತಿರುವ ನಡುವೆಯೇ ರೈತರ ಜೀವನಾಡಿ ಆಗಿರುವ ಕರ್ನಾಟಕ ಹಾಲು ಮಹಾಮಂಡಳಿಯು ಸುಮಾರು 1 ಕೋಟಿ ರೂ. ವೆಚ್ಚದಲ್ಲಿ 200 ಹಾಸಿಗೆಗಳಿಗೆ ಆಕ್ಸಿಜನ್ ಪೂರೈಕೆ ಮಾಡುವ ನಿರ್ಧಾರ ತೆಗೆದುಕೊಂಡಿದೆ ಎಂದು ಕೆಎಂಎಫ್ ಅಧ್ಯಕ್ಷ ಹಾಗೂ ಶಾಸಕ ಬಾಲಚಂದ್ರ ಜಾರಕಿಹೊಳಿ ಅವರು ತಿಳಿಸಿದ್ದಾರೆ.
ಮಂಗಳವಾರದಂದು ಕೆಎಂಎಫ್ ಪ್ರಧಾನ ಕಛೇರಿಯಲ್ಲಿ ನಡೆದ ಅಧಿಕಾರಿಗಳ ಸಭೆಯಲ್ಲಿ ಈ ವಿಷಯ ತಿಳಿಸಿದ ಅವರು, ಆಕ್ಸಿಜನ್ ಕೊರತೆಯಿಂದಾಗಿ ಬಹಳಷ್ಟು ಕೊರೋನಾ ಸೊಂಕಿತರು ಸಾವಿಗಿಡಾಗುತ್ತಿರುವ ಹಿನ್ನೆಲೆಯಲ್ಲಿ ಸೊಂಕಿತರ ಅನುಕೂಲಕ್ಕಾಗಿ 200 ಬೆಡ್ ಆಕ್ಸಿಜನ್ ವ್ಯವಸ್ಥೆ ಮಾಡಲಾಗುತ್ತಿದೆ. ಬೆಡ್, ಸಿಲಿಂಡರ್ ಮತ್ತು ಆಕ್ಸಿಜನ್ ಉತ್ಪಾದನೆ ಮಾಡಲು ಸಾಮಥ್ರ್ಯವಿರುವ ಕಂಪನಿಯೊಂದಕ್ಕೆ ಟೆಂಡರ್‍ನ್ನು ನೀಡಲಾಗುತ್ತಿದೆ. ಸೊಂಕಿತರಿಗೆ ಆಕ್ಸಿಜನ್‍ನ್ನು ಉಚಿತವಾಗಿ ನೀಡಲು ಯೋಜಿಸಿದ್ದು, ಸರ್ಕಾರಿ ಆಸ್ಪತ್ರೆಯೊಂದನ್ನು ಗುರುತಿಸಿ ಅಲ್ಲಿ ಆಕ್ಸಿಜನ್ ವ್ಯವಸ್ಥೆ ಕಲ್ಪಿಸಿಕೊಡಲಾಗುವುದು. ಸೊಂಕಿತರಿಗೆ ಈ ಸೌಲಭ್ಯ ಪೂರ್ತಿಯಾಗಿ ಉಚಿತವಾಗಿದ್ದು, ತಿಂಗಳೊಳಗೆ ಕೊರೊನಾ ಸೊಂಕಿತರಿಗೆ ಆಕ್ಸಿಜನ್ ಪೂರೈಕೆ ಮಾಡಲಾಗುವುದು ಎಂದು ಅವರು ಹೇಳಿದರು.
ರೈತರ ಬಾಳಿನ ಆಶಾ ಕಿರಣವಾಗಿರುವ ಕೆಎಂಎಫ್ ಪ್ರಸಕ್ತ 2020-21ನೇ ಸಾಲಿನಲ್ಲಿ 170 ಕೋಟಿ ರೂ.ಗಳ ನಿವ್ವಳ ಲಾಭ ಗಳಿಸಿದೆ. ದಿನನಿತ್ಯ 81.50 ಲಕ್ಷ ಲೀ ಹಾಲು ಸಂಗ್ರಹವಾಗುತ್ತಿದೆ. ಕೋವಿಡ್ ಸಂದರ್ಭದಲ್ಲಿ 28 ಲಕ್ಷ ಲೀ ಹಾಲನ್ನು ಹಾಲಿನ ಪೌಡರನ್ನಾಗಿ ಪರಿವರ್ತಿಸಲಾಗುತ್ತಿದೆ. 52 ಲಕ್ಷ ಲೀ ಹಾಲು ಹಾಗೂ ಹಾಲಿನ ಉತ್ಪನ್ನಗಳನ್ನು ಮಾರಾಟ ಮಾಡಲಾಗುತ್ತಿದೆ. ಕೋವಿಡ್‍ನಂತಹ ಸಂದಿಗ್ಧ ಸಂದರ್ಭದಲ್ಲೂ ರೈತರಿಂದ ಹಾಲನ್ನು ತಪ್ಪದೇ ಸಂಗ್ರಹಿಸಿಕೊಳ್ಳಲಾಗುತ್ತಿದೆ. ರೈತರಿಗೆ ಯಾವುದೇ ತೊಂದರೆಯಾಗದಂತೆ ನಮ್ಮ ಸಿಬ್ಬಂದಿಗಳು ಕರ್ತವ್ಯ ನಿರ್ವಹಿಸುತ್ತಿದ್ದಾರೆ ಎಂದು ಹೇಳಿದ ಅವರು, ಕೆಎಂಎಫ್‍ನ ಎಲ್ಲ ನೌಕರ ವರ್ಗದವರಿಗೆ ಇನ್ಸೂರನ್ಸ್ ಸೌಲಭ್ಯವನ್ನು ಕಲ್ಪಿಸಿಕೊಡಲಾಗಿದೆ ಎಂದು ಹೇಳಿದರು.
ಲಾಕಡೌನ್ ಹಿನ್ನೆಲೆಯಲ್ಲಿ ಸರ್ಕಾರದ ಆದೇಶದನ್ವಯ ಹಾಲು ಮತ್ತು ಹಾಲಿನ ಉತ್ಪನ್ನಗಳ ನಂದಿನಿ ಮಾರಾಟ ಮಳಿಗೆಗಳಲ್ಲಿ ದಿನಪೂರ್ತಿ ತೆರೆಯಲು ಅವಕಾಶ ಕಲ್ಪಿಸಲಾಗಿದೆ. ಗ್ರಾಹಕರು ಹಾಗೂ ಸಾರ್ವಜನಿಕರು ಇದರ ಸದುಪಯೋಗಪಡಿಸಿಕೊಳ್ಳಬೇಕು. ಮಾರಾಟ ಮಳಿಗೆಗಳಲ್ಲಿ ಸಾಮಾಜಿಕ ಅಂತರ ಕಾಪಾಡುವುದರ ಜೊತೆಗೆ ಕಡ್ಡಾಯವಾಗಿ ಮಾಸ್ಕ್ ಧರಿಸಬೇಕು. ಕೋವಿಡ್ ನಿಯಮಗಳನ್ನು ಕಡ್ಡಾಯವಾಗಿ ಪಾಲಿಸಿ ಸಹಕರಿಸುವಂತೆ ಕೆಎಂಎಫ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ಅವರು ರೈತರಲ್ಲಿ ಹಾಗೂ ಗ್ರಾಹಕರಲ್ಲಿ ಮನವಿ ಮಾಡಿಕೊಂಡಿದ್ದಾರೆ.
ವ್ಯವಸ್ಥಾಪಕ ನಿರ್ದೇಶಕ ಬಿ.ಸಿ. ಸತೀಶ, ಪಶು ಸಂಗೋಪನೆ, ಮಾರುಕಟ್ಟೆ, ಗುಣ ನಿಯಂತ್ರಣ, ಅಭಿಯಂತರ, ಖರೀದಿ ವಿಭಾಗದ ಮುಖ್ಯಸ್ಥರು ಈ ಸಭೆಯಲ್ಲಿ ಪಾಲ್ಗೊಂಡಿದ್ದರು.