ಮೂಡಲಗಿ: ತಾಲೂಕಿನ ಹುಣಶ್ಯಾಳ ಪಿಜಿ ಬಳಿಯ ಸತೀಶ ಶುಗರ್ಸ್ ಕಾರ್ಖಾನೆಗೆ ಪೂರ್ವ ಆಫ್ರಿಕಾದ ರೂವಾಂಡಾ ದೇಶದ ಹೈ ಕಮಿಷನರ್ ಶ್ರೀಮತಿ.ಜಾಕ್ವೆಲಿನ್ ಮುಕಂಜಿರಾ ಮತ್ತು ರೂವಾಂಡಾದ ರಾಜತಾಂತ್ರಿಕ ಮೊಹನ ಸುರೇಶ ಅವರ ನೇತೃತ್ವದ ಹಿರಿಯ ಅಧಿಕಾರಿಗಳ ತಂಡ ಭೇಟಿ ನೀಡಿತು.
ನಿಯೋಗವು ಕಾರ್ಖಾನೆಯ ಎಲ್ಲ ವಿಭಾಗಗಳಿಗೆ ಭೇಟಿ ನೀಡಿ, ಕಾರ್ಖಾನೆಯ ಪ್ರಗತಿಯನ್ನು ಆಲಿಸಿ, ಕಾರ್ಖಾನೆಯಲ್ಲಿನ ಮೂಲ ಸೌಕರ್ಯ, ಉದ್ಯಮ ಸ್ನೇಹಿ ವಾತಾವರಣ ಮತ್ತು ಕಾರ್ಖಾನೆಯು ಗ್ರಾಮೀಣ ಭಾಗದ ರೈತರು, ಯುವಜನತೆ ಮತ್ತು ಮಕ್ಕಳ ಶಿಕ್ಷಣಕ್ಕೆ ನೀಡುತ್ತಿರುವಂತಹ ಉತ್ತೇಜನ ಸೇರಿದಂತೆ ಹಲವಾರು ಸಮಾಜಮುಖಿ ಕಾರ್ಯಗಳನ್ನು ಮಾಡುವ ಮೂಲಕ ಸಮಾಜ ಸೇವೆಯಲ್ಲಿ ತೊಡಗಿರುವುದನ್ನು ಕಂಡು ಪ್ರಭಾವಿತರಾದ ಶ್ರೀಮತಿ ಜಾಕ್ವೆಲಿನ್ ಮುಕಂಜಿರಾ ಕಾರ್ಖಾನೆಯನ್ನು ಅಭಿವೃದ್ದಿ ಪಡಿಸುವಲ್ಲಿ ಕಾರ್ಖಾನೆಯ ಆಡಳಿತ ಮಂಡಳಿಯವರ ಕಾರ್ಯ ವೈಖರಿಯನ್ನು ಶ್ಲಾóಘಿಸಿ, ಕಾರ್ಖಾನೆಯ ಸ್ವಚ್ಚತೆಯ ಕುರಿತು ಪ್ರಶಂಸೆ ವ್ಯಕ್ತಪಡಿಸಿದರು.
ಸಂಸ್ಥೆಯ ಚೇರಮನ್ ಮತ್ತು ಸಿ.ಎಫ್.ಓ ಪ್ರದೀಪಕುಮಾರ ಇಂಡಿ ಅವರು ನಿಯೋಗವನ್ನು ಸ್ವಾಗತಿಸಿ ಮಾತನಾಡುತ್ತ, ನಿಯೋಗದ ಇಂತಹ ಭೇಟಿಯಿಂದ ರೂವಾಂಡಾ ಮತ್ತು ಬೆಳಗಾವಿಯ ನಡುವಿನ ವ್ಯಾಪಾರ ಅವಕಾಶಗಳನ್ನು ಅಭಿವೃದ್ದಿ ಪಡಿಸುವ ಮೂಲಕ ಅಂತಾರಾಷ್ಟ್ರೀಯ ವ್ಯಾಪಾರ ವಹಿವಾಟಿಗೆ ಸಹಾಯವಾಗಲಿದೆ ಎಂದು ಆಶಯ ವ್ಯಕ್ತಪಡಿಸಿದರು.
ಚಿಕ್ಕೋಡಿ ಲೋಕಸಭಾ ಸಂಸದರು ಹಾಗೂ ಸತೀಶ ಶುಗರ್ಸ್ ಮತ್ತು ಬೆಳಗಾಂ ಶುಗರ್ಸ್ ಕಾರ್ಖಾನೆಗಳ ವ್ಯವಸ್ಥಾಪಕ ನಿರ್ದೇಶಕಿ ಕುಮಾರಿ.ಪ್ರಿಯಾಂಕಾ ಜಾರಕಿಹೊಳಿ, ಯರಗಟ್ಟಿ ಶುಗರ್ಸ್ ಪ್ರೈವೇಟ್ ಲಿಮಿಟೆಡ್‍ನ ವ್ಯವಸ್ಥಾಪಕ ನಿರ್ದೇಶಕರು ಮತ್ತು ಸತೀಶ ಶುಗರ್ಸ್ ಹಾಗೂ ಬೆಳಗಾಂ ಶುಗರ್ಸ್ ಕಾರ್ಖಾನೆಗಳ ನಿರ್ದೇಶಕ ರಾಹುಲ ಜಾರಕಿಹೊಳಿಯವರು, ಹಿರಿಯ ಉಪಾಧ್ಯಕ್ಷರಾದ ಪಿ.ಡಿ.ಹಿರೇಮಠ, ಹಣಕಾಸು ವಿಭಾಗದ ಉಪಾಧ್ಯಕ್ಷ ಡಿ.ಆರ್.ಪವಾರ, ತಾಂತ್ರಿಕ ವಿಭಾಗದ ಉಪಾಧ್ಯಕ್ಷರುಗಳಾದ ವಿ.ಎಮ್.ತಳವಾರ, ಎ.ಎಸ್.ರಾಣಾ ತಂಡದ ಜೊತೆಗಿದ್ದರು.