ಗೋಕಾಕ ತಾಲ್ಲೂಕಿನ ಸುಕ್ಷೇತ್ರ ಸಾವಳಗಿಯ ಜಗದ್ಗುರು ಶ್ರೀ ಶಿವಲಿಂಗೇಶ್ವರ ಸಿದ್ಧ ಸಂಸ್ಥಾನ ಪೀಠದಲ್ಲಿ ಬುಧವಾರ ದಸರಾ ಮಹೋತ್ಸವದ ಸೀಮೋಲ್ಲಂಘನದಲ್ಲಿ ಜಗದ್ಗುರು ಶಿವಲಿಂಗೇಶ್ವರ ಕುಮಾರೇಂದ್ರ ಸ್ವಾಮೀಜಿಯವರು ಬನ್ನಿ ಮಂಟಪದಲ್ಲಿ ಸೀಮೋಲ್ಲಂಘನ ನೆರವೇರಿಸಿದರು.
————————————————–
ಸಾವಳಗಿ ಶ್ರೀಪೀಠದಲ್ಲಿ ವಿಜಯದಶಮಿಯ ಸೀಮೋಲ್ಲಂಘನ ಸಂಭ್ರಮ
‘ಸದ್ಭಾವನೆಯಲ್ಲಿ ಶಾಂತಿ, ನೆಮ್ಮದಿ ಪ್ರಾಪ್ತಿ’
ಗೋಕಾಕ: ಬುಧವಾರ ಸಂಜೆ ಕುಂಭಹೊತ್ತ ಮತ್ತು ಆರತಿಗಳನ್ನು ಹಿಡಿದ ಸುಮಂಗಲಿಯರ ಸಾಲು. ವಿವಿಧ ವಾದ್ಯ ವೃಂದಗಳ ನಿನಾದ, ಭಕ್ತಿಯ ಜಯಘೋಷಗಳೊಂದಿಗೆ ಹಿಂದೂ-ಮುಸ್ಲಿಂ ಭಾವ್ಯೆಕ್ಯತೆಯ ದಸರಾ ಮಹೋತ್ಸವದ ಸೀಮೋಲ್ಲಂಘನೆಯನ್ನು ಮಂಗಳವಾರ ಸಂಜೆ ಸಾವಳಗಿಯ ಶಿವಲಿಂಗೇಶ್ವರ ಮಠದ ಜಗದ್ಗುರು ಶಿವಲಿಂಗೇಶ್ವರ ಕುಮಾರೇಂದ್ರ ಸನ್ನಿಧಿಯವರು ನೆರವೇರಿಸಿದರು.
ಹಸಿರು ರಾಜಪೋಷಾಕಿನಲ್ಲಿ ವಿವಿಧ ವಾದ್ಯವೃಂದ, ಸಕಲ ರಾಜಮರ್ಯಾದೆ, ಬಿರುದಾವಳಿಗಳ ಘೋಷಣೆಗಳೊಂದಿಗೆ ಅಶ್ವಾರೂಢರಾಗಿ ಬನ್ನಿಮಂಟಪ್ಪಕ್ಕೆ ಆಗಮಿಸಿದರು. ಸಂಪ್ರದಾಯದಂತೆ ಬನ್ನಿವೃಕ್ಷಕ್ಕೆ ಪೂಜೆಯನ್ನು ನೆರವೇರಿಸಿ ಆಯಧಗಳಿಂದ ಬನ್ನಿಯನ್ನು ಕತ್ತರಿಸಿರುವ ಮೂಲಕ ಸೀಮೊಲ್ಲಂಘನವನ್ನು ನೆರವೇರಿಸಿದರು.
ಮೆರವಣಿಗೆಯಲ್ಲಿ ರೈತರು ತಾವು ಬೆಳೆದ ಕಬ್ಬನ್ನು ಕೈಯಲ್ಲಿ ಹಿಡಿದು ಮೆರವಣಿಗೆಯಲ್ಲಿ ಸಾಗುವ ದೃಶ್ಯವು ಮನಮೋಹಕವಾಗಿತ್ತು.
ಬನ್ನಿಮಂಟಪದಿಂದ ಮೆರವಣಿಗೆಯು ಸಾವಳಗಿಯ ಪ್ರಮುಖ ಬೀದಿಗಳಲ್ಲಿ ಸಾಗಿ ಪೀಠದಲ್ಲಿ ಜರುಗಿದ ಧರ್ಮಸಭೆಯ ಸಾನ್ನಿಧ್ಯವಹಿ ಮಾತನಾಡಿದ ಸನ್ನಿಧಿಯವರು
‘ಜಾತಿ, ಮತ, ಪಂಥ ಎನ್ನದೆ ಸದ್ಭಾವನೆಯಲ್ಲಿ ಶಾಂತಿ, ನೆಮ್ಮದಿ ಇದ್ದು, ಅಲ್ಲಿ ಪರಮಾತ್ಮನ ಸಾಕ್ಷಾತ್ಕಾರದ ಕೃಪೆಯಾಗುವುದು’ ಎಂದರು.
ಸತ್ಯ, ಶುದ್ಧತೆ, ಪ್ರಾಮಾಣಿಕತೆ ಮತ್ತು ನಿಜ ಭಕ್ತಿಯು ಇಂದಿನ ಅವಶ್ಯಕತೆ ಇದ್ದು, ಸನ್ಮಾರ್ಗದಲ್ಲಿ ನಡೆಯುವ ಮೂಲಕ ಜೀವನವನ್ನು ಸಾರ್ಥಕ ಮಾಡಿಕೊಳ್ಳಬೇಕು ಎಂದರು.
ರಾಚಯ್ಯ ವಿ. ಹಿರೇಮಠಮದರಿ ಅವರು ದೇವಿ ಪುರಾಣವನ್ನು ಮಂಗಲ ಮಾಡಿದರು.
ವೀರೇಶ ಕಿತ್ತೂರ ಅವರು ಪ್ರಸ್ತುತಪಡಿಸಿದ ವಚನ ಗಾಯನವು ಕೇಳುಗರನ್ನು ಮನತಣಿಸಿತು.
ಕಾರ್ಯಕ್ರಮಕ್ಕೆ ಆಗಮಿಸಿದ್ದ ಸಾಧಕರು, ಕಲಾವಿದರನ್ನು ಸನ್ಮಾನಿಸಿ ಗೌರವಿಸಿದರು.
ಸಂಚಾಲಕ ಬಾಲಶೇಖರ ಬಂದಿ ಪ್ರಾಸ್ತಾವಿಕ ಮಾತನಾಡಿದರು.
ರೋಹಿಣಿ ಬಂಗಾರಿ, ಎಂ.ಎಸ್. ತೋಡಕರ ನಿರೂಪಿಸಿದರು.