ದ್ಯಾಮವ್ವದೇವಿ ಮಹಾನ್ ಶಕ್ತಿ ದೇವತೆಯಾಗಿದ್ದಾಳೆ:ಡಾ.ಮುರುಘರಾಜೇಂದ್ರ ಶ್ರೀಗಳು
*ಗ್ರಾಮದೇವತೆ ಜಾತ್ರಾಮಹೋತ್ಸವ ಸಂಪನ್ನ*ಸಮಾರೂಪ ಸಮಾರಂಭ*ಗಣ್ಯರಿಗೆ ಸತ್ಕಾರ
ಬೆಟಗೇರಿ: ಶ್ರೇದ್ಧೆ, ಭಕ್ತಿಯಿಂದ ನಡೆದುಕೊಂಡವರನ್ನು ಶ್ರೀದೇವಿಯು ರಕ್ಷಣೆ ಮಾಡುತ್ತಾಳೆ. ಶ್ರೀದೇವಿಯನ್ನು ಹಲವು ನಾಮಾಂಕಿತಗಳಿಂದ ಕರೆಯುತ್ತಾರೆ. ಗ್ರಾಮದೇವತೆ ದ್ಯಾಮವ್ವದೇವಿ ಮಹಾನ್ ಶಕ್ತಿ ದೇವತೆಯಾಗಿದ್ದಾಳೆ ಎಂದು ಮುಗಳಖೋಡದ ಡಾ.ಮುರುಘರಾಜೇಂದ್ರ ಮಹಾಸ್ವಾಮಿಜಿ ಹೇಳಿದರು.
ಐದು ವರ್ಷಕ್ಕೂಮ್ಮೆ ಐದು ದಿನಗಳ ಕಾಲ ಜರುಗುವ ಗೋಕಾಕ ತಾಲೂಕಿನ ಬೆಟಗೇರಿ ಗ್ರಾಮದೇವತೆ ಶ್ರೀದ್ಯಾಮವ್ವದೇವಿ 3ನೇ ಜಾತ್ರಾಮಹೋತ್ಸವ ಹಾಗೂ ವಿವಿಧ ಧಾರ್ಮಿಕ ಕಾರ್ಯಕ್ರಮಗಳು 5ನೇ ದಿನವಾದ ಜು.28ರಂದು ನಡೆದ ಸತ್ಕಾರ ಹಾಗೂ ಜಾತ್ರಾಮಹೋತ್ಸವ ಸಮಾರೂಪ ಸಮಾರಂಭದ ದಿವ್ಯ ಸಾನಿಧ್ಯ ವಹಿಸಿ ಮಾತನಾಡಿದರು.
ಬೆಟಗೇರಿ ಗ್ರಾಮದ ಭಕ್ತರಿಗೆ ಮುಗಳಖೋಡ ಮಠಕ್ಕೆ ಅವಿನಾಭಾವ ಸಂಬಂಧವಿದೆ. ಹರ, ಗುರು, ಚರಮೂರ್ತಿಗಳನ್ನ ತಮ್ಮ ಗ್ರಾಮಕ್ಕೆ ಆಹ್ವಾನಿಸಿ ಸುಜ್ಞಾನದ ವಿಷಯಗಳನ್ನು ಶ್ರವಣ ಮಾಡುತ್ತಿರುವ ಮತ್ತು ವಿವಿಧ ಧಾರ್ಮಿಕ ಕಾರ್ಯಕ್ರಮ ಆಯೋಜನೆ ಮಾಡುತ್ತಿರುವ ಬೆಟಗೇರಿ ಗ್ರಾಮಸ್ಥರ ಕಾರ್ಯ ಶ್ಲಾಘನೀಯವಾಗಿದೆ ಎಂದು ಮುಗಳಖೋಡದ ಡಾ.ಮುರುಘರಾಜೇಂದ್ರ ಮಹಾಸ್ವಾಮಿಜಿ ಹೇಳಿದರು.
ಬಾಗೋಜಿಕೊಪ್ಪದ ಡಾ. ಶಿವಲಿಂಗ ಶಿವಾಚಾರ್ಯ ಮಹಾಸ್ವಾಮಿಜಿ, ಸುಣಧೋಳಿಯ ಅಭಿನವ ಶಿವಾನಂದ ಮಹಾಸ್ವಾಮಿಜಿ, ಮಮದಾಪೂರದ ಮೌನಮಲ್ಲಿಕಾರ್ಜುನ ಮಹಾಸ್ವಾಮಿಜಿ, ಕಡಕೋಳದ ಸಿದ್ರಾಯಜ್ಜನವರು ನೇತೃತ್ವ ವಹಿಸಿದ್ದರು. ಯುವಮುಖಂಡ ಸರ್ವೋತ್ತಮ ಜಾರಕಿಹೊಳಿ ಸತ್ಕಾರ ಮೂರ್ತಿಗಳಾಗಿ ಮಾತನಾಡಿದರು.
ರಂಗಭೂಮಿ ಹಿರಿಯ ಕಲಾವಿದ ಈಶ್ವರಚಂದ್ರ ಬೆಟಗೇರಿ, ಜಿಪಂ, ತಾಪಂ, ಗ್ರಾಪಂ, ವಿವಿಧ ಸಂಘ ಸಂಸ್ಥೆಗಳ ಹಾಲಿ ಮತ್ತು ಮಾಜಿ ಅಧ್ಯಕ್ಷರು, ಸದಸ್ಯರು, ಗಣ್ಯರು, ಸಂತ-ಶರಣರು, ಸ್ಥಳೀಯ ಶ್ರೀದೇವಿಯ ಭಕ್ತರು, ಗಣ್ಯರು, ಗ್ರಾಮದೇವತೆ ಜಾತ್ರಾಮಹೋತ್ಸವ ಆಚರಣಾ ಸಮಿತಿ ಪದಾಧಿಕಾರಿಗಳು, ಸದಸ್ಯರು, ಗ್ರಾಮದೇವಿ ದೇವಾಲಯ ಅರ್ಚಕರು, ಸ್ಥಳೀಯರು ಇದ್ದರು.
ಜಾತ್ರಾಮಹೋತ್ಸವ ಸಂಪನ್ನ: ಮುಂಜಾನೆ 10:30ಗಂಟೆಗೆ ಹರ, ಗುರು, ಚರಮೂರ್ತಿಗಳ, ಗಣ್ಯರ, ರಾಜಕೀಯ ಮುಖಂಡರ ಭವ್ಯ ಮೆರವಣಿಗೆ ಸಕಲ ವಾದ್ಯಾಮೇಳಗಳೊಂದಿಗೆ ಅಡವಿಸಿದ್ದೇಶ್ವರ ದೇವಸ್ಥಾನದಿಂದ ಶ್ರೀ ಗಜಾನನ ವೇದಿಕೆ ತನಕ ನಡೆಯಿತು. ಶ್ರೀಗಳು, ಗಣ್ಯರು, ವಿವಿಧ ವಲಯದ ಸಾಧಕರು, ದಾನಿಗಳನ್ನು ಜಾತ್ರಾಮಹೋತ್ಸವ ಸಮಿತಿ ವತಿಯಿಂದ ಸತ್ಕರಿಸಲಾಯಿತು. ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದವರಿಗೆ ಬಹುಮಾನ ವಿತರಿಸಲಾಯಿತು. ಮಧ್ಯಾಹ್ನ12ಗಂಟೆಗೆ ಪುರ ಜನರಿಂದ ಶ್ರೀದೇವಿಗೆ ಉಡಿ ತುಂಬುವ ಮತ್ತು ನೈವೇದ್ಯ ಸಮರ್ಪನೆ ಕಾರ್ಯಕ್ರಮ ಜರುಗಿ ಪ್ರಸಕ್ತ ಗ್ರಾಮದೇವತೆ ಜಾತ್ರಾ ಮಹೋತ್ಸವ ಐದು ದಿನಗಳ ಅದ್ದೂರಿಯಾಗಿ ನಡೆದು ಜುಲೈ.28ರಂದು ಸಂಪನ್ನಗೊಂಡಿತು. ರಾತ್ರಿ ಶ್ರೀದೇವಿಯನ್ನು ಸೀಮೆಗೆ ಕಳುಹಿಸಲಾಯಿತು.