ರೈತ ಸಂಪರ್ಕ ಕೇಂದ್ರದ ನೂತನ ಕಟ್ಟಡ ಉದ್ಘಾಟನಾ ಸಮಾರಂಭ
ಬನವಾಸಿ: ರೈತರು ಕೃಷಿಯಲ್ಲಿ ಹೊಸ ಹೊಸ ತಂತ್ರಜ್ಞಾನ ಅಳವಡಿಸಿಕೊಂಡು ಆರ್ಥಿಕವಾಗಿ ಸದೃಡ ಹೊಂದಬೇಕು ಎಂದು ಕಾರ್ಮಿಕ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಶಿವರಾಮ್ ಹೆಬ್ಬಾರ್ ಹೇಳಿದರು.
ಅವರು ಪಟ್ಟಣದಲ್ಲಿ ಶನಿವಾರ ಜಿಲ್ಲಾ ಪಂಚಾಯತ್ ಉತ್ತರ ಕನ್ನಡ, ಶಿರಸಿ ತಾಲೂಕು ಪಂಚಾಯತ್ ಮತ್ತು ತಾಲೂಕು ಆಡಳಿತ ಹಾಗೂ ಶಿರಸಿ ಕೃಷಿ ಇಲಾಖೆ ಇವುಗಳ ಸಂಯುಕ್ತ ಆಶ್ರಯದಲ್ಲಿ ಹಮ್ಮಿಕೊಂಡ ಬನವಾಸಿ ರೈತ ಸಂಪರ್ಕ ಕೇಂದ್ರದ ನೂತನ ಕಟ್ಟಡ ಉದ್ಘಾಟಿಸಿ ಮಾತನಾಡುತ್ತಾ ಬನವಾಸಿ ಮತ್ತು ಸುತ್ತಲಿನ ರೈತರ ಅನುಕೂಲಕ್ಕಾಗಿ ಆರ್‍ಐಡಿಎಫ್-23 ಯೋಜನೆಯಡಿಯಲ್ಲಿ ಕೃಷಿಕರ ಹಿತ ದೃಷ್ಠಿಯಿಂದ 50 ಲಕ್ಷ ರೂ. ವೆಚ್ಚದಲ್ಲಿ ನೂತನ ಕಟ್ಟಡ ನಿರ್ಮಿಸಲಾಗಿದೆ ರೈತರು ಇದರ ಸದುಪಯೋಗವನ್ನು ಪಡೆದು ಕೊಳ್ಳಬೇಕು. ಅಧಿಕಾರಿಗಳು ರೈತ ಸಂಪರ್ಕ ಕೇಂದ್ರಕ್ಕೆ ಬರುವ ರೈತರನ್ನು ಗೌರವದಿಂದ ಕಾಣಬೇಕು. ರೈತನ ಮುಖದಲ್ಲಿ ನಗುವಿದ್ದರೆ ದೇಶವೇ ನಗುವಿನಿಂದ ಕೂಡಿರುತ್ತದೆ.
ಜಿಲ್ಲಾಮಟ್ಟದ ಆದರ್ಶ ಕೃಷಿಕ ಪ್ರಶಸ್ತಿ ನಮ್ಮ ಕ್ಷೇತ್ರಕ್ಕೆ ಬಂದಿರುವುದು ಸಂತೋಷ ತಂದಿದೆ. ಕೊರೊನಾ ಲಾಕ್‍ಡೌನ್ ಸಂದರ್ಭದಲ್ಲಿ ರಾಜ್ಯದಲ್ಲಿನ ದೊಡ್ಡ ದೊಡ್ಡ ಉದ್ಯಮಗಳು, ಹೋಟೆಲ್, ಗಾರ್ಮೆಂಟ್ಸ್ ಎಲ್ಲವೂ ಬಂದ್ ಆಗಿದೆ. ಆದರೆ ಎಂತಹ ಸಂಕಷ್ಟ ಬಂದರೂ ಕೃಷಿ ಮಾತ್ರ ನಿಲ್ಲಲಿಲ್ಲ. ಸರ್ಕಾರದ ವತಿಯಿಂದ ರೈತರಿಗೆ ಹಲವೂ ಸಹಕಾರಗಳನ್ನು ನೀಡಲಾಗುತ್ತಿದೆ. ರೈತರು ಇದರ ಲಾಭ ಪಡೆದುಕೊಳ್ಳಿ ಎಂದರು.
ತಾಲೂಕು ಪಂಚಾಯಿತಿ ಅಧ್ಯಕ್ಷೆ ಶ್ರೀಲತಾ ಕಾಳೇರಮನೆ ಅಧ್ಯಕ್ಷತೆವಹಿಸಿದ್ದರು. ಈ ಸಂದರ್ಭದಲ್ಲಿ ಜಿಲ್ಲಾಮಟ್ಟದ ಆದರ್ಶ ಕೃಷಿಕ ಪ್ರಶಸ್ತಿ ಪಡೆದ ಕೃಷಿಕರನ್ನು ಗೌರವಿಸಲಾಯಿತು.
ಕಾರ್ಯಕ್ರಮದಲ್ಲಿ ಜಿ.ಪಂ ಸದಸ್ಯೆ ರೂಪಾ ನಾಯ್ಕ್, ಬಸವರಾಜ ದೊಡ್ಮನಿ, ಉಷಾ ಹೆಗಡೆ, ಸುರೇಶ ನಾಯ್ಕ್, ಲತಾ ನಾಯ್ಕ್, ಪ್ರೇಮಾ ಬೇಡರ, ಎಸ್.ಎನ್. ಭಟ್ಟ, ಜಂಟಿ ಕೃಷಿ ನಿರ್ದೇಶಕ ಹೊನ್ನಪ್ಪ ಗೌಡ, ಶಿರಸಿ ಉಪ ಕೃಷಿ ನಿರ್ದೇಶಕ ಟಿ.ಎಚ್. ನಟರಾಜ್ ಹಾಗೂ ಶಿರಸಿ ಸಹಾಯಕ ಕೃಷಿ ನಿರ್ದೇಶಕ ಮಧುಕರ ನಾಯ್ಕ್, ಡಿ.ಎಲ್. ನಾಯ್ಕ್, ಗುತ್ತಿಗೆದಾರ ಗುಣಶೇಖರ ಪಿಳ್ಳೈ, ಕೃಷಿ ಅಧಿಕಾರಿ ವಾಸಂತಿ ನಾಗರಳಿ, ಸಹಾಯಕ ಕೃಷಿ ಅಧಿಕಾರಿ ದಾಮೋಧರ ಪಾಟ್ಘರ್, ಸಿಬ್ಬಂದಿಗಳಾದ ಚಂದ್ರಕಲಾ ಬಿದರಿ, ಕಾವ್ಯ ಗೌಡ ಇದ್ದರು.
ಈ ಭಾಗದ ರೈತರಿಗೆ ಅನುಕೂಲವಾಗಲೆಂದು ಭತ್ತ ಖರೀದಿ ಕೇಂದ್ರವನ್ನು ಬನವಾಸಿಯಲ್ಲೇ ಮಾಡಲಾಗಿದೆ. ಭತ್ತ ಖರೀದಿಗಾಗಿ ಶಿರಸಿಗೆ ಹೋಗುವ ಅಗತ್ಯವಿಲ್ಲ. –
ಶಿವರಾಮ್ ಹೆಬ್ಬಾರ್