ಬೆಟಗೇರಿ:ಗ್ರಾಮದ ವಿವಿಡಿ ಸರ್ಕಾರಿ ಪ್ರೌಢ ಶಾಲೆಯ ಶಿಕ್ಷಕರಿಂದ ಪ್ರಸಕ್ತ ವರ್ಷದ ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳಿಗೆ ಪರೀಕ್ಷಾ ಭಯ ನಿವಾರಿಸುವ ನಿಟ್ಟಿನಲ್ಲಿ ಕೆಲವು ವಿನೂತನ ವಿಶೇಷ ಕಾರ್ಯಕ್ರಮಗಳನ್ನು ಆಯೋಜಿಸುವ ಮೂಲಕ ಪ್ರೇರಣಾ ಕಾರ್ಯ ಮಾಡಲಾಗುತ್ತಿದೆ ಎಂದು ಇಲ್ಲಿಯ ವಿವಿಡಿ ಸರ್ಕಾರಿ ಪ್ರೌಢ ಶಾಲೆಯ ಮುಖ್ಯೋಪಾಧ್ಯಯ ರಮೇಶ ಅಳಗುಂಡಿ ಹೇಳಿದರು.
ಮಂಗಳವಾರ ಜು.13ರಂದು ಅವರು, ‘ನಮ್ಮ ನಡೆ ಮಕ್ಕಳ ಮನೆ ಕಡೆ’ ವಿನೂತನ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿ, ಮೂಡಲಗಿ ಶೈಕ್ಷಣಿಕ ವಲಯದ ಬಿಇಒ ಅಜೀತ ಮನ್ನಿಕೇರಿ ಅವರ ಮಾರ್ಗದರ್ಶನದಂತೆ ಸ್ಥಳೀಯ ಪ್ರೌಢ ಶಾಲೆಯ ಶಿಕ್ಷಕರು ವಿದ್ಯಾರ್ಥಿಗಳ ಮನೆ ಮನೆಗೆ ತೆರಳಿ ಗಣಿತ ಕಠಿಣ ಪಾಠಗಳ, ಪರೀಕ್ಷೆ ಬರೆಯುವ ವಿಧಾನ ಸೇರಿದಂತೆ ಹಲವಾರು ವಿಷಯಗಳ ಕುರಿತು ಮಾಹಿತಿ ಹೇಳಿಕೊಡುತ್ತಿದ್ದಾರೆ ಎಂದರು.
ಜು.13ರಂದು ಶಾಲೆಯ ಹಲವಾರು ಜನ ವಿದ್ಯಾರ್ಥಿಗಳ ತೋಟದ ಮನೆಗಳಿಗೆ ತೆರಳಿ ಮುಖ್ಯಾಧ್ಯಾಪಕ ರಮೇಶ ಅಳಗುಂಡಿ, ಶಿಕ್ಷಕರಾದ ಪ್ರಕಾಶ ಕುರಬೇಟ, ಮಲ್ಲಿಕಾರ್ಜುನ ಹಿರೇಮಠ, ಮೋಹನ ತುಪ್ಪದ, ವಿ.ಬಿ.ಬಿರಾದಾರ, ಶುಭಾ ಬಿ., ಅವರು ವಿದ್ಯಾರ್ಥಿ ಮತ್ತು ಪಾಲಕರ ಜೋತೆ ಚರ್ಚಿಸಿ ಮಗುವಿನ ಕಲಿಕೆ ಹಾಗೂ ಪರೀಕ್ಷಾ ತಯಾರಿ ಕುರಿತು ಸೂಕ್ತ ಸಲಹೆ ಮಾರ್ಗದರ್ಶನ ನೀಡಲಾಯಿತು ಎಂದು ಮುಖ್ಯೋಪಾಧ್ಯಯ ರಮೇಶ ಅಳಗುಂಡಿ ತಿಳಿಸಿದ್ದಾರೆ.
ವಿನೂತನ ಕಾರ್ಯಕ್ರಮ ಆಯೊಜನೆ ಮಕ್ಕಳಿಗೆ ಪ್ರೇರಣೆ: ಪ್ರಸಕ್ತ ವರ್ಷದ ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳ ತೋಟದ ಮನೆ ಸೇರಿದಂತೆ ಊರಿನಲ್ಲಿರುವ ಮನೆ ಮನೆಗೆ ತೆರಳಿ ಪರೀಕ್ಷೆ ಕುರಿತು ಸೂಕ್ತ ಮಾಹಿತಿ ನೀಡುತ್ತಿರುವ ಬೆಟಗೇರಿ ಗ್ರಾಮದ ವಿವಿಡಿ ಸರ್ಕಾರಿ ಪ್ರೌಢ ಶಾಲೆಯ ಮುಖ್ಯೋಪಾಧ್ಯಯ ಮತ್ತು ಶಿಕ್ಷಕರ ಕಾರ್ಯ ಶ್ಲಾಘನೀಯವಾಗಿದೆ. ಶಿಕ್ಷಕರು ಹೊಗುವುದರಿಂದ ಮಕ್ಕಳಿಗೆ ಮತ್ತಷ್ಟು ಪ್ರೇರಣೆ ಜೊತೆಗೆ ವಿದ್ಯಾರ್ಥಿ ಮತ್ತು ಪಾಲಕರಿಗೆ ಸೂಕ್ತ ಸಲಹೆ ಮಾರ್ಗದರ್ಶನ ನೀಡಿದಂತಾಗುತ್ತದೆ. ವಿದ್ಯಾರ್ಥಿ ಮತ್ತು ಪಾಲಕರು ಹಾಗೂ ಶಿಕ್ಷಕರ ನಡುವೆ ಅವಿನಾಭಾವ ಸಂಬಂಧವೂ ಸಹ ಬೆಸೆಯುತ್ತದೆ ಎಂದು ಮೂಡಲಗಿ ಶೈಕ್ಷಣಿಕ ವಲಯ ಬಿಇಒ ಅಜೀತ ಮನ್ನಿಕೇರಿ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.