ನ.1ರಂದು ಬೆಟಗೇರಿಯಲ್ಲಿ ಅದ್ಧೂರಿ ಕನ್ನಡ ರಾಜ್ಯೋತ್ಸವ ಆಚರಣೆ
*ಭುವನೇಶ್ವರಿದೇವಿ-ಡಾ.ಬೆಟಗೇರಿ ಕೃಷ್ಣಶರ್ಮರ ಭಾವಚಿತ್ರದ ಭವ್ಯ ಮೇರವಣಿಗೆ*
ಆನಂದಕಂದರ ದಿವ್ಯ ಸ್ಮರಣೋತ್ಸವ ಸಮಾರಂಭ
ಬೆಟಗೇರಿ:ಗ್ರಾಮದ ಕರ್ನಾಟಕ ರಕ್ಷಣಾ ವೇದಿಕೆ, ಗ್ರಾಮ ಪಂಚಾಯತಿ, ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘ ಹಾಗೂ ಹಾಲು ಉತ್ಪಾದಕರ ಸಹಕಾರಿ ಸಂಘ ಇವರ ಸಂಯುಕ್ತ ಆಶ್ರಯದಲ್ಲಿ ಡಾ.ಬೆಟಗೇರಿ ಕೃಷ್ಣಶರ್ಮರ ದಿವ್ಯ ಸ್ಮರಣೋತ್ಸವ ಹಾಗೂ ಕನ್ನಡ ರಾಜ್ಯೋತ್ಸವ ಆಚರಣೆ ಸಮಾರಂಭ ಗೋಕಾಕ ತಾಲೂಕಿನ ಬೆಟಗೇರಿ ಗ್ರಾಮದಲ್ಲಿ ನ.1 ರಂದು ಜರುಗಲಿದೆ.
ಸ್ಥಳೀಯ ಕರವೇದವರ ನೇತೃತ್ವದಲ್ಲಿ ಅಂದು ಮುಂಜಾನೆ 8 ಗಂಟೆಗೆ ಗ್ರಾಮದ ವಿವಿಧ ವೃತ್ತದಲ್ಲಿರುವ ಪುತ್ಥಳಿಗಳಿಗೆ ಪೂಜೆ, ಪುಷ್ಪಾರ್ಪಣೆ ಸಮರ್ಪಣೆ ಬಳಿಕ ಇಲ್ಲಿಯ ಅಶ್ವಾರೂಢ ಬಸವೇಶ್ವರ ವೃತ್ತದಿಂದ ಸಂಗೊಳ್ಳಿ ರಾಯಣ್ಣ ವೃತ್ತದವರೆಗೆ ಶಾಲಾ ಕಾಲೇಜು ವಿದ್ಯಾರ್ಥಿ-ವಿದ್ಯಾರ್ಥಿನಿಯರಿಂದ ವಿವಿಧ ರೂಪಕಗಳ, ಜಾನಪದ ಕಲಾ ತಂಡಗಳು ಸೇರಿದಂತೆ ಸಕಲ ವಾದ್ಯಮೇಳಗಳೊಂದಿಗೆ ಭುವನೇಶ್ವರಿ ದೇವಿಯ ಮತ್ತು ಡಾ.ಬೆಟಗೇರಿ ಕೃಷ್ಣಶರ್ಮರ ಭಾವಚಿತ್ರದ ಭವ್ಯ ಮೇರವಣಿಗೆ ನಡೆಯಲಿದೆ.
ಸಂಜೆ 6:30 ಗಂಟೆಗೆ ಸ್ಥಳೀಯ ಗಜಾನನ ವೇದಿಕೆ ಮೇಲೆ ಡಾ.ಬೆಟಗೇರಿ ಕೃಷ್ಣಶರ್ಮರ ದಿವ್ಯ ಸ್ಮರಣೋತ್ಸವ ಕಾರ್ಯಕ್ರಮ ಜರುಗಲಿದೆ. ಸುಣಧೋಳಿ ಅಭಿನವ ಶಿವಾನಂದ ಸ್ವಾಮೀಜಿ ದಿವ್ಯ ಸಾನಿಧ್ಯ, ಶಾಸಕ ಬಾಲಚಂದ್ರ ಜಾರಕಿಹೊಳಿ ಉದ್ಘಾಟನೆ ನೆರವೇರಿಸಲಿದ್ದಾರೆ. ಬೆಟಗೇರಿ ಕರವೇ ಅಧ್ಯಕ್ಷ ಈರಣ್ಣ ಬಳಿಗಾರ ಅಧ್ಯಕ್ಷತೆ ವಹಿಸಲಿದ್ದು, ರಂಗಭೂಮಿ ಹಿರಿಯ ಕಲಾವಿದ ಈಶ್ವರಚಂದ್ರ ಬೆಟಗೇರಿ, ಅಭಾಸಾಪ ಜಿಲ್ಲಾಧ್ಯಕ್ಷ ಮಹಾಂತೇಶ ತಾಂವಶಿ ಗೌರವಾನ್ವಿತ ಅತಿಥಿಗಳಾಗಿ, ಗೋಕಾಕ ಕಸಾಪ ಅಧ್ಯಕ್ಷೆ ಭಾರತಿ ಮದಭಾಂವಿ ಮುಖ್ಯ ಅತಿಥಿಗಳಾಗಿ, ಗೋಕಾಕ ಸಪಪೂ ಮಹಾವಿದ್ಯಾಲಯದ ಸಹಶಿಕ್ಷಕ ರಾಮಪ್ಪ ಮಿರ್ಜಿ ಉಪನ್ಯಾಸ ನೀಡಲಿದ್ದಾರೆ. ಸ್ಥಳೀಯ ಗ್ರಾಪಂ ಅಧ್ಯಕ್ಷೆ ತೇಜಸ್ವಿನಿ ನೀಲಣ್ಣವರ, ಹಾಉಸಸಂಘದ ಅಧ್ಯಕ್ಷ ಹನಮಂತ ಪಾಟೀಲ, ಪಿಕೆಪಿಎಸ್ ಅಧ್ಯಕ್ಷ ಮಲ್ಲಿಕಾರ್ಜುನ ಸೋಮಗೌಡ್ರ ಅತಿಥಿಗಳಾಗಿ ಆಗಮಿಸಲಿದ್ದಾರೆ.
ಕನ್ನಡ ಕೋಗಿಲೆ ಖ್ಯಾತಿಯ ಮಹನ್ಯಾ ಪಾಟೀಲ, ಮೊಬೈಲ್ ಮಲ್ಲ ಖ್ಯಾತಿಯ ಮಲ್ಲಪ್ಪ ಹೊಂಗಲ ಅವರಿಂದ ಸಂಜೆ 8:30 ಗಂಟೆಗೆ ಸಂಗೀತ ಮತ್ತು ಹಾಸ್ಯ ಸಂಜೆ ಕಾರ್ಯಕ್ರಮ ನಡೆಯಲಿದೆ. ಸ್ಥಳೀಯ ಕನ್ನಡ ಪರ ಹೋರಾಟಗಾರರು, ಸಾಹಿತಿ-ಶರಣರು, ಗಣ್ಯರು, ಗ್ರಾಪಂ ಹಾಗೂ ವಿವಿಧ ಸಂಘ, ಸಂಸ್ಥೆಗಳ ಆಡಳಿತ ಮಂಡಳಿ ಅಧ್ಯಕ್ಷರು, ಸದಸ್ಯರು, ಯುವಕರು, ಕರವೇ ಪದಾಧಿಕಾರಿಗಳು, ಸದಸ್ಯರು, ಕನ್ನಡ ರಾಜ್ಯೋತ್ಸವ ಭವ್ಯ ಮೆರವಣಿಗೆ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದು ಸ್ಥಳೀಯ ಕರವೇ ಅಧ್ಯಕ್ಷ ಈರಣ್ಣ ಬಳಿಗಾರ ಪತ್ರಿಕಾ ಪ್ರಕಟನೆಗೆ ತಿಳಿಸಿದ್ದಾರೆ.