ಮೂಡಲಗಿ: ವೈದ್ಯರು ವೃತ್ತಿಬದ್ಧತೆ ಮೈಗೂಡಿಸಿಕೊಂಡು ಹಲವು ಸವಾಲುಗಳನ್ನು ಎದುರಿಸಿ, ಹಲವಾರು ಜೀವ ಉಳಿಸಿ ಜನರ ಮನದಲ್ಲಿ ದೇವರೆನಿಸಿಕೊಂಡಿದ್ದಾರೆ ಹಾಗೂ ಪತ್ರಕರ್ತರು ಸಹ ಕೊರೋನಾ ಬಗ್ಗೆ ಜಾಗೃತಿ ಮೂಡಿಸುವಲ್ಲಿ ಮುಖ್ಯ ಪಾತ್ರವಹಿಸಿದ್ದಾರೆ ಎಂದು ಜಯ ಕರ್ನಾಟಕ ಜನರಪ ವೇದಿಕೆಯ ಜಿಲ್ಲಾಧ್ಯಕ್ಷ ಶಿವರಡ್ಡಿ ಹುಚರಡ್ಡಿ ಹೇಳಿದರು.
ತಾಲೂಕಾ ಘಟಕದ ಜಯ ಕರ್ನಾಟಕ ಜನಪರ ವೇದಿಕೆಯಿಂದ ಪಟ್ಟಣದ ಸುರಕ್ಷಾ ಪ್ಯಾರಾ ಮೆಡಿಕಲ್ ಕಾಲೇಜ ಸಭಾಂಗಣದಲ್ಲಿ ಶುಕ್ರವಾರರಂದು ಜರುಗಿದ ವೈದ್ಯ ಹಾಗೂ ಪತ್ರಕರ್ತರ ದಿನಾಚಾರಣೆಯ ನಿಮಿತ್ಯ ವೈದ್ಯರಿಗೆ ಮತ್ತು ಪತ್ರಕರ್ತರಿಗೆ ಸತ್ಕಾರ ಸಮಾರಂಭ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ವೈದ್ಯರು ಕೊರೋನಾ ಸಂಕಷ್ಟದಲ್ಲಿ ತಮ್ಮ ಜೀವದ ಹಂಗು ತೊರೆದು ಸೋಂಕಿತರ ಪ್ರಾಣ ಉಳಿಸುವ ಏಕೈಕ ಗುರಿಯೊಂದಿಗೆ ಸಮಯ ನಿಗಧಿ ಇಲ್ಲದೆ ಮಾಡಿರುವ ನಿಸ್ವಾರ್ಥ ಸೇವೆಗೆ ಬೆಲೆ ಕಟ್ಟಲಾಗದು. ಆದರೆ ಕೆಲವು ಸಂದರ್ಭಗಳಲ್ಲಿ ವೈದ್ಯರ ಮೇಲೆ ಹಲ್ಲೆ ನಡೆದಿರುವುದು ವಿಷಾದಕರ ಸಂಗತಿಯಾಗಿದೆ. ಜನರು ದೇವರನ್ನು ಹೇಗೆ ಪೂಜಿಸುತ್ತಾರೋ ಹಾಗೆ ಇಂದಿನ ದಿನಮಾನಗಳಲ್ಲಿ ವೈದ್ಯರನ್ನು ಪೂಜಿಸುವಂತಾಗಿದೆ ಎಂದರು.
ಸಮುದಾಯ ಆರೋಗ್ಯ ಕೇಂದ್ರದ ಆಡಳಿತ ವೈದ್ಯಾದಿಕಾರಿ ಭಾರತಿ ಕೋಣಿ ಮಾತನಾಡಿ, ಕೊರೋನಾ ಮುಕ್ತ ದೇಶಕ್ಕೆ ಸಾರ್ವಜನಿಕರಿಗೆ ಲಸಿಕೆ ಹಾಕಿಸಿಕೊಳ್ಳುವಂತೆ ಜಾಗೃತಿ ಕಾರ್ಯಕ್ರಮಗಳನ್ನು ಜನಪರ ವೇದಿಕೆ ಹಮ್ಮಿಕೊಳ್ಳಬೇಕು ಎಂದರು.
ಪತ್ರಕರ್ತ ಮಲ್ಲು ಬೋಳನವರ ಮಾತನಾಡಿ, ಪತ್ರಿಕೆಗಳು ಸಮಾಜPವನ್ನು ಎಚ್ಚರಿಸುವಲ್ಲಿ ಪ್ರಮುಖ ಪಾತ್ರ ನಿರ್ವಹಿಸುತ್ತಿವೆ, ಸಮಾಜದಲ್ಲಿರುವ ಅಂಕು ಡೊಂಕುಗಳನ್ನು ತಿದ್ದುವಂತ ಕಾರ್ಯ ಮಾಡುವುದರ ಜೊತೆಗೆ ಅಪಾಯ ಲೆಕ್ಕಿಸದೆ ಕೊರೋನಾ ಜಾಗೃತಿ ಮೂಡಿಸಿರುವ ಪತ್ರಕರ್ತರನ್ನು ಹಾಗೂ ಜೀವ ರಕ್ಷಕ ವೈದ್ಯರನ್ನು ಸತ್ಕರಿಸಿದ ಜನಪರ ವೇದಿಕೆಯು ಸಮಾಜಮುಖಿ ಕಾರ್ಯದೊಂದಿಗೆ ಜನಪರವಾಗಿ ನಿಲ್ಲಲಿ ಎಂದರು.
ವೈದ್ಯರಾದ ಡಾ .ಎಸ್ ಎಸ್ ಪಾಟೀಲ ಸಂದೀಪ ಕನಕರಡ್ಡಿ, ಸಂಜಯ ಶಿಂಧಿಹಟ್ಟಿ ಮಾತನಾಡಿದರು.
ಈ ಸಂದರ್ಭದಲ್ಲಿ ಸಂಘಟನೆಯ ತಾಲೂಕಾಧ್ಯಕ್ಷ ಶಿವನಗೌಡ ಪಾಟೀಲ, ಅಪ್ಪಾಸಾಬ ನಧಾಪ್, ರೇಖಾ ನಾವಿ, ರುಕ್ಮವ್ವ ದಳವಾಯಿ, ಮುತ್ತು ಧಾರವಾಡ, ಹಣಮಂತ ಶಾಂತಗಿರಿ, ರವಿ ಧಾರವಾಡ ಹಾಗೂ ಪತ್ರಕರ್ತರು ಇದ್ದರು.
