‘ಪತ್ರಿಕಾ ವೃತ್ತಿಯ ಪಾವಿತ್ರ್ಯಕ್ಕೆ ಧಕ್ಕೆಯಾಗದಂತೆ ಕಾರ್ಯನಿರ್ವಹಿಸಿ’
ಮೂಡಲಗಿ: ‘ಪತ್ರಕರ್ತರಿಗೆ ವೃತ್ತಿ ಧರ್ಮ ಮುಖ್ಯವಾಗಿದ್ದು, ಪತ್ರಿಕಾ ವೃತ್ತಿಯ ಪಾವಿತ್ರ್ಯತೆಗೆ ಧಕ್ಕೆಯಾಗದಂತೆ ನಿಷ್ಠೆಯಿಂದ ಕಾರ್ಯಮಾಡಬೇಕು’ ಎಂದು ಪತ್ರಿಕಾ ಅಕಾಡೆಮಿ ಪ್ರಶಸ್ತಿ ಪುರಸ್ಕøತ ಮಹಾಲಿಂಗಪುರದ ಮಲ್ಲಿಕಾರ್ಜುನ ಹೆಗ್ಗಳಗಿ ಹೇಳಿದರು.
ಇಲ್ಲಿಯ ಚೈತನ್ಯ ವಸತಿ ಆಶ್ರಮ ಶಾಲೆಯ ಆತಿಥ್ಯದಲ್ಲಿ ಮೂಡಲಗಿ ತಾಲ್ಲೂಕು ಪತ್ರಕರ್ತರ ಬಳಗದಿಂದ ಆಚರಿಸಿದ ಪತ್ರಿಕಾ ದಿನಾಚರಣೆ ಸಮಾರಂಭದ ಮುಖ್ಯ ಅತಿಥಿಯಾಗಿ ಮತ್ತು ಸಂಘಟಕರು ನೀಡಿದ ಸನ್ಮಾನವನ್ನು ಸ್ವೀಕರಿಸಿ ಮಾತನಾಡಿದ ಅವರು ಸುದ್ದಿ ಬರವಣಿಗೆಯಲ್ಲಿ ಸತ್ಯವನ್ನು ಎಂದಿಗೂ ಮರೆಮಾಚಬಾರದು ಎಂದರು.
ಪತ್ರಕರ್ತರಲ್ಲಿ ನಿರಂತವಾದ ಓದು, ಮಾಹಿತಿ ಸಂಗ್ರಹ ಇದ್ದರೆ ಗುಣಮಟ್ಟದ ಬರವಣಿಗೆ ಮಾಡಲು ಸಾಧ್ಯ. ಪತ್ರಕರ್ತರಾದವರು ಸಮಾಜವನ್ನು ತಿದ್ದುವ ಕಾರ್ಯಮಾಡಬೇಕು. ಪತ್ರಿಕೆಯಲ್ಲಿ ಬರುವ ಪ್ರತಿಯೊಂದು ಸುದ್ದಿಯು ಸಮಾಜವನ್ನು ಮುನ್ನುಡಿಸುವಂತಾಗಬೇಕು ಎಂದರು.
ಕಾರ್ಯಕ್ರಮವನ್ನು ಉದ್ಘಾಟಿಸಿದ ತಹಶೀಲ್ದಾರ್ ಡಿ.ಜೆ. ಮಹಾತ್ ಅವರು ಮಾತನಾಡಿ ಮಾಧ್ಯಮ ಕ್ಷೇತ್ರವು ಉತ್ತಮ ಕಾರ್ಯವನ್ನು ಮಾಡುವ ಮೂಲಕ ಸಮಾಜವನ್ನು ಬೆಳೆಸಬೇಕು ಎಂದರು.
ಕ್ಷೇತ್ರ ಶಿಕ್ಷಣಾಧಿಕಾರಿ ಅಜಿತ್ ಮನ್ನಿಕೇರಿ ಮಾತನಾಡಿ ಪತ್ರಿಕೆಗಳು ಕೇವಲ ಸುದ್ದಿಗಳನ್ನು ಮಾತ್ರ ನೀಡುವುದಿಲ್ಲ ಜ್ಞಾನವನ್ನು ನೀಡುವ ಮೂಲಕ ವ್ಯಕ್ತಿಗಳನ್ನು ಪರಿಪೂರ್ಣರನ್ನಾಗಿಸುತ್ತವೆ ಎಂದರು.
ಸಿಪಿಐ ವೆಂಕಟೇಶ ಮುರನಾಳ ಮಾತನಾಡಿ ಹಲವಾರು ಅನಿಷ್ಠ ಪದ್ದತಿಗಳಿಂದ ಸಮಾಜವನ್ನು ಮುಕ್ತಗೊಳಿಸುವಲ್ಲಿ ಮಾಧ್ಯಮಗಳ ಪಾತ್ರ ಮಹತ್ವದಾಗಿದೆ. ಸಮಾಜಕ್ಕೆ ಮಾಧ್ಯಮವು ದಿಕ್ಸೂಚಿಯಾಗಿ ಕಾರ್ಯಮಾಡಬೇಕು ಎಂದರು.
ಅಧ್ಯಕ್ಷತೆವಹಿಸಿದ್ದ ಚೈತನ್ಯ ಸಂಸ್ಥೆಯ ವೈ.ಬಿ. ಪಾಟೀಲ ಮಾತನಾಡಿ ಪತ್ರಿಕಾ ದಿನಾಚರಣೆಯ ಆತಿಥ್ಯವನ್ನು ಪ್ರತಿ ವರ್ಷವೂ ವಹಿಸಿಕೊಳ್ಳುತ್ತೇವೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಪುರಸಭೆ ಅಧ್ಯಕ್ಷ ಹಣಮಂತ ಗುಡ್ಲಮನಿ, ಉಪಾಧ್ಯಕ್ಷೆ ರೇಣುಕಾ ಹಾದಿಮನಿ, ಪಿಎಸ್‍ಐ ಎಚ್.ವೈ. ಬಾಲದಂಡಿ, ವೈದ್ಯಾಧಿಕಾರಿ ಡಾ. ಭಾರತಿ ಕೋಣಿ, ತಾಲ್ಲೂಕು ಪಂಚಾಯ್ತಿ ಕಾರ್ಯಾಲಯದ ಹಣಮಂತ ಬಳಿಗಾರ ಅತಿಥಿಯಾಗಿ ಉಪಸ್ಥಿತರಿದ್ದರು.
ಜನಸೇವಾ ಪತ್ರಕರ್ತರ ಸಂಘದ ಅಧ್ಯಕ್ಷ ಅಕ್ಬರ ಪೀರಜಾದೆ, ಮೂಡಲಗಿ ತಾಲ್ಲೂಕು ಪತ್ರಕರ್ತರ ಸಂಘದ ಅಧ್ಯಕ್ಷ ಉಮೇಶ ಬೆಳಕೂಡ ವೇದಿಕೆಯಲ್ಲಿದ್ದರು.
ಪ್ರೆಸ್ ಅಸೋಶಿಯೇಶನ್ ಅಧ್ಯಕ್ಷ ಲಕ್ಷ್ಮಣ ಅಡಿಹುಡಿ ಸ್ವಾಗತಿಸಿದರು, ಬಾಲಶೇಖರ ಬಂದಿ ಪ್ರಾಸ್ತಾವಿಕ ಮಾತನಾಡಿದರು, ಸಿದ್ದು ದುರದುಂಡಿ ಮತ್ತು ವಿ.ಎಚ್. ಬಾಲರಡ್ಡಿ ನಿರೂಪಿಸಿದರು, ಮಲ್ಲು ಬೋಳನ್ನವರ ವಂದಿಸಿದರು.