ಹುಮನಾಬಾದ್ ತಹಶೀಲ್ದಾರ ಮೇಲೆ ಹಲ್ಲೆ ಖಂಡಿಸಿ ಮೂಡಲಗಿ ಗ್ರಾಮ ಲೇಕ್ಕಾಧಿಕಾರಿಗಳ ಸಂಘದಿಂದ ಮನವಿ
ಮೂಡಲಗಿ : ಕರ್ತವ್ಯ ನಿರತ ಬೀದರ ಜಿಲ್ಲೆ ಹುಮನಾಬಾದ್ ತಹಶೀಲ್ದಾರ ಮೇಲೆ ಕೆಲ ಪುಂಡರು ಮಾರಣಾಂತಿಕವಾಗಿ ಹಲ್ಲೆ ನಡೆಸಿರುವ ಘಟನೆ ಖಂಡಿಸಿ ಮೂಡಲಗಿ ತಾಲೂಕಾ ಗ್ರಾಮ ಲೆಕ್ಕಾಧಿಕಾರಿಗಳ ಸಂಘದಿಂದ ತಹಶೀಲ್ದಾರ ಡಿ ಜಿ.ಮಹಾತ್ ಅವರ ಮೂಲಕ ಹಲ್ಲೆ ಮಾಡಿದ ಪುಂಡರ ವಿರುದ್ದ ಸೂಕ್ತ ಕ್ರಮಕೈಗೊಳ್ಳುವಂತೆ ಹಾಗೂ ಕಂದಾಯ ಇಲಾಖೆಯ ನೌಕರರ ಮೇಲೆ ನಡೆಯುತ್ತಿರುವ ಹಲ್ಲೆಗಳಿಗೆ ಕಠಿಣ ಕಾನೂನು ರೂಪಿಸುವಂತೆ ಆಗ್ರಹಿಸಿ ಶನಿವಾರದಂದು ಕಂದಾಯ ಇಲಾಖೆಯ ಪ್ರಧಾನ ಕಾರ್ಯದರ್ಶಿಗಳಿಗೆ ಮನವಿ ಸಲ್ಲಿಸಿದರು.
ಈ ವೇಳೆ ಗ್ರಾಮ ಲೆಕ್ಕಾಧಿಕಾರಿಗಳ ಸಂಘದ ತಾಲೂಕಾಧ್ಯಕ್ಷ ಎಸ್ ಬಿ ಪಾಶ್ಚಾಪೂರ ಮಾತನಾಡಿ, ತಹಶೀಲ್ದಾರ ಡಾ. ಪ್ರದೀಪ್ ಹಿರೇಮಠ ಅವರು ಕಚೇರಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದ ವೇಳೆ ಕೆಲ ವ್ಯಕ್ತಿಗಳು ಅವಾಚ್ಯ ಶಬ್ದಗಳಿಂದ ನಿಂಧಿಸಿ, ಅವರ ಮೇಲೆ ಹಲ್ಲೆ ಮಾಡಿದ್ದು ಖಂಡನೀಯ. ಪುಂಡರ ವಿರುದ್ದ ಕ್ರಮ ಕೈಗೊಂಡು ಕೂಡಲೇ ಬಂಧಿಸಬೇಕು. ಇಂತಹ ಘಟನೆಗಳು ಮರುಕಳಿಸದಂತೆ ಕಠಿಣ ಕಾನೂನು ರೂಪಿಸಿ, ನೌಕರರಿಗೆ ಸೂಕ್ತ ರಕ್ಷಣೆ ನೀಡಬೇಕು ಎಂದು ಆಗ್ರಹಿಸಿದರು.
ಗ್ರಾಮ ಲೆಕ್ಕಾಧಿಕಾರಿ ಕರಿಷ್ಮಾ ನದಾಫ್ ಮಾತನಾಡಿ, ಇತ್ತೀಚಿನ ದಿನಗಳಲ್ಲಿ ಸರ್ಕಾರಿ ಅಧಿಕಾರಿಗಳು ಹಾಗೂ ನೌಕರರ ಮೇಲೆ ರಾಜ್ಯದ ವಿವಿಧ ಭಾಗಗಳಲ್ಲಿ ಹಲ್ಲೆ ಪ್ರಕರಣಗಳು ಹೆಚ್ಚುತ್ತಿವೆ. ಇದರಿಂದಾಗಿ ನೌಕರರ ಆತ್ಮಸ್ಥೈರ್ಯ ಕುಂದುವುದು ಖಚಿತ. ಸರ್ಕಾರಿ ನೌಕರರ ಮೇಲೆ ಹಲ್ಲೆ ನಡೆಸಿದವರನ್ನು ಬಿಗಿಯಾದ ಕಾನೂನಿನ ಚೌಕಟ್ಟಿನ ವ್ಯಾಪ್ತಿಯೊಳಗೆ ತರಬೇಕು ಎಂದು ಒತ್ತಾಯಿಸಿ, ಸರ್ಕಾರಿ ನೌಕರರು ಅನೇಕ ಒತ್ತಡಗಳ ಮಧ್ಯೆ ಜೀವ ಭಯದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಆದರೆ ಇಂತಹ ಘಟನೆಗಳಿಂದ ನೌಕರರಲ್ಲಿ ಭಯದ ವಾತಾವರಣ ನಿರ್ಮಾಣವಾಗಿದೆ. ಹಲ್ಲೆ ಮಾಡಿದ ತಪ್ಪಿತಸ್ಥರ ಮೇಲೆ ಕ್ರಮ ಜರುಗಿಸಿ, ಸರ್ಕಾರಿ ನೌಕರರು ಉತ್ತಮ ರೀತಿಯಲ್ಲಿ ಕರ್ತವ್ಯ ನಿರ್ವಹಿಸಲು ವಾತಾವರಣ ನಿರ್ಮಾಣವಾಗಬೇಕೆಂದು ಆಗ್ರಹಿಸಿದರು.
ಈ ಸಂದರ್ಭದಲ್ಲಿ ಗ್ರೇಡ್2 ತಹಶೀಲ್ದಾರ ಶಿವಾನಂದ ಬಬಲಿ, ಶಿರಸ್ತೇದಾರ ಪರುಶುರಾಮ ನಾಯಿಕ, ಗ್ರಾಮ ಲೆಕ್ಕಾಧಿಕಾರಿಗಳಾದ ಎಸ್.ಎಸ್.ಅಗ್ನೆಪ್ಪಗೋಳ, ಎಸ್.ಎಸ್.ಮುದಗಲ್, ಕರಿಷ್ಮಾ ನದಾಫ್, ಭಾರತಿ ಕಾಳಿ, ವಾಯ್ ಎಮ್.ಉದ್ದಪ್ಪನ್ನವರ, ಎಮ್ ಆರ್.ಕರಿಗಾರ, ಪಿ.ಎಸ್.ಕುಂಬಾರ, ಯಡವನ್ನವರ, ಸಿದ್ದು ಬಿಸ್ವಾಗರ, ನವೀನ್ ಕೌಜಲಗಿ, ಮಲ್ಲು ಮುಗಳಖೋಡ, ಮತ್ತಿತರು ಇದ್ದರು.