ಮೂಡಲಯಲ್ಲಿ ದಲಿತ ವಚನಕಾರರ ಜಯಂತಿ ಆಚರಣೆ
ದಲಿತ ವಚನಕಾರ ಕುರಿತು ಚಿಂತನ, ಮಂಥನಗಳು ನಡೆಯಬೇಕು
ಮೂಡಲಗಿ: ‘ದಲಿತ ವಚನಕಾರರ ಸಾಧನೆ, ಸಂದೇಶಗಳ ಬಗ್ಗೆ ಯುವ ಪೀಳಿಗೆಗೆ ಗೊತ್ತಾಗುವ ರೀತಿಯಲ್ಲಿ ನಿರಂತರವಾಗಿ ಚಿಂತನ, ಮಂಥನಗಳು ನಡೆಯಬೇಕು’ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಅಜಿತ ಮನ್ನಿಕೇರಿ ಹೇಳಿದರು.
ಇಲ್ಲಿಯ ತಹಶೀಲ್ದಾರ್ ಕಚೇರಿಯ ಸಭಾಭವನದಲ್ಲಿ ಮಂಗಳವಾರ ದಲಿತ ವಚನಕಾರರ ಜಯಂತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು 12ನೇ ಶತಮಾನದ ಶರಣರಲ್ಲಿ ದಲಿತ ವಚನಕಾರರು ಮುಖ್ಯವಾಗಿ ಗುರುತಿಸಿಕೊಂಡಿದ್ದರು ಎಂದರು.
ದಲಿತ ವಚನಕಾರರಾದ ಮಾದಾರ ಚೆನ್ನಯ್ಯ, ಡೋಹರ ಕಕ್ಕಯ್ಯ ಸಮಗಾರ ಹರಳಯ್ಯ, ಮಾದಾರ ಗೂಳಯ್ಯ, ಉರುಲಿಂಗ ಪೆದ್ದಿ ಅವರ ಅನೇಕ ವಚನಗಳ ಸಂದೇಶಗಳು ಸರ್ವಕಾಲಿಕವಾಗಿವೆ ಎಂದರು.
ಪುರಸಭೆ ಸದಸ್ಯ ಪ್ರಕಾಶ ಮಾದರ, ಸತ್ಯೆಪ್ಪ ಕರವಾಡೆ, ಪುರಸಭೆ ಮಾಜಿ ಸದಸ್ಯ ರಮೇಶ ಸಣ್ಣಕ್ಕಿ ಮಾತನಾಡಿ ಸರ್ಕಾರವು ದಲಿತ ವಚನಕಾರರ ಕುರಿತು ಅಧ್ಯಯನ ಪೀಠಗಳನ್ನು ಸ್ಥಾಪಿಸಿ ನಿರಂತವಾಗಿ ಸಂಶೋಧನೆ, ಅಧ್ಯಯನ ನಡೆಯುವಂತಾಗಬೇಕು.
ದಲಿತ ವಚನಕಾರರ ಕುರಿತು ಪುಸ್ತಕಗಳನ್ನು ಪ್ರಕಟಿಸಿ ಜನರಿಗೆ ಕಡಿಮೆ ಬೆಲೆಯಲ್ಲಿ ದೊರೆಯುವಂತಾಗಬೇಕು. ದಲಿತ ವಚನಕಾರರು ಜನಮಾನಸದಲ್ಲಿ ಉಳಿಯುವಂತಾಗಬೇಕು ಎಂದರು.
ಸಾಹಿತಿ, ಪತ್ರಕರ್ತ ಬಾಲಶೇಖರ ಬಂದಿ ಮಾತನಾಡಿ ದಲಿತ ವಚನಕಾರರೆಲ್ಲೂರ ಬಸವಣ್ಣನವರಿಗೆ ಅತ್ಯಂತ ನಿಕಟಕವಾಗಿದ್ದರು. ಜಾತಿ, ಧರ್ಮ, ಮೇಲು, ಕೀಳು ಎನ್ನುವ ಭಾವನೆಗಳನ್ನು ಕಿತ್ತುಹಾಕುವಲ್ಲಿ ದಲಿತ ವಚನಕಾರರು ಬಸವಣ್ಣನವರಿಗೆ ಕೈಜೋಡಿಸಿದ್ದರು.
ವಚನ ಸಾಹಿತ್ಯಕ್ಕೆ ದಲಿತ ಶರಣರ ಕೊಡುಗೆಯು ಅಪಾರವಾಗಿದೆ ಎಂದರು.
ಅತಿಥಿಯಾಗಿ ಪುರಸಭೆ ಉಪಾಧ್ಯಕ್ಷೆ ರೇಣುಕಾ ಹಾದಿಮನಿ, ಗ್ರೇಡ್2 ತಹಶೀಲ್ದಾರ್ ಶಿವಾನಂದ ಬಬಲಿ, ಪುರಸಭೆ ವ್ಯವಸ್ಥಾಪಕ ಎಂ.ಎಸ್. ಪಾಟೀಲ, ಪುರಸಭೆ ಸದಸ್ಯ ರವೀಂದ್ರ ಸಣ್ಣಕ್ಕಿ, ದಲಿತ ಮುಖಂಡರಾದ ಶಾಬಪ್ಪ ಸಣ್ಣಕ್ಕಿ, ಬಾಳೇಶ ಬನ್ನಟ್ಟಿ, ಎಬಿಜೇಜರ ಕರಬನ್ನವರ, ಲಕ್ಷ್ಮಣ ಕೆಳಗಡೆ, ಈರಪ್ಪ ಢವಳೇಶ್ವರ ಉಪಸ್ಥಿತರಿದ್ದರು.
ಸಮಾಜ ಕಲ್ಯಾಣ ಇಲಾಖೆ ಕಚೇರಿಯ ಅಧೀಕ್ಷಕ ರವೀಂದ್ರ ತಳವಾರ ಪ್ರಾಸ್ತಾವಿಕ ಮಾತನಾಡಿ ಸ್ವಾಗತಿಸಿದರು.