ಮೂಡಲಗಿ :- ಸ್ವತಂತ್ರ ಪೂರ್ವದಿಂದ ಹಿಡಿದು ಪ್ರಚಲಿತ ದಿನಗಳವರೆಗೂ ದೇಶದ ಜನತೆಗೆ ವಿಸ್ತೃತವಾದ ಸುದ್ದಿಗಳನ್ನು ಬಿತ್ತರಿಸುವಲ್ಲಿ ಪ್ರಾದೇಶಿಕ ಪತ್ರಿಕಗಳ ಪಾತ್ರ ಮಹತ್ತರವಾಗಿದೆ ಎಂದು ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಅಜಿತ್ ಮನ್ನಿಕೇರಿ ಹೇಳಿದರು
ಸೋಮವಾರದಂದು ಪಟ್ಟಣದ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಸಸಿಗೆ ನೀರುಣಿಸಿ, ರೋಗಿಗಳಿಗೆ ಹಣ್ಣು ವಿತರಿಸುವ ಮೂಲಕ ನೂತನ ಮೂಡಲಗಿ ತಾಲೂಕ ಪ್ರಾದೇಶಿಕ ಪತ್ರಕರ್ತರ ಸಂಘ ಉದ್ಘಾಟಿಸಿ ಮಾತನಾಡಿದ ಅವರು, ಪತ್ರಕರ್ತರು ಹಾಗೂ ಪತ್ರಿಕೆಗಳು ದೇಶದ ನಾಗರೀಕರಿಗೆ ಸುದ್ದಿಗಳನ್ನು ತಲುಪಿಸಿ ದೇಶದ ಆಗುಹೋಗುಗಳ ಕುರಿತು ಅರಿವು ಮೂಡಿಸುತ್ತ ಪರೋಕ್ಷವಾಗಿ ಶಿಕ್ಷಕರ ಪಾತ್ರ ನಿಭಾಯಿಸುತ್ತಿದ್ದಾರೆ. ಜನರ ಬೇಡಿಕೆಗಳನ್ನು ಸರ್ಕಾರಕ್ಕೆ, ಸರ್ಕಾರದ ಯೋಜನೆಗಳನ್ನು ಜನರಿಗೆ ತಲುಪಿಸುವಲ್ಲಿ ಪತ್ರಿಕೆಗಳು ಹಾಗೂ ವರದಿಗಾರರು ಸಂಪರ್ಕ ಕೊಂಡಿಯಾಗಿ ಕೆಲಸ ಮಾಡುತ್ತಿದ್ದಾರೆ ಎಂದು ಶ್ಲಾಘಿಸಿದರು.
ಮೂಡಲಗಿ ಪ್ರಾದೇಶಿಕ ಪತ್ರಕರ್ತ ಸಂಘದ ಪ್ರಧಾನ ಕಾರ್ಯದರ್ಶಿ ಚಂದ್ರಶೇಖರ್ ಪತ್ತಾರ ಪ್ರಾಸ್ತಾವಿಕವಾಗಿ ಮಾತನಾಡಿ ಪ್ರಾದೇಶಿಕ ಪತ್ರಿಕೆಗಳು ಒಂದೇ ಜಿಲ್ಲೆಗೆ ಸೀಮಿತವಾಗಿರದೆ ಮುದ್ರಣ ವಾಗುವ ಪ್ರತಿ ಸ್ಥಳೀಯ ಸುದ್ದಿಗಳು ಅನೇಕ ಜಿಲ್ಲೆಗಳಲ್ಲಿಯೂ ಪ್ರಕಟವಾಗಿರುತ್ತವೆ, ಒಬ್ಬ ವ್ಯಕ್ತಿ ಉತ್ತಮ ವರದಿಗಾರನಾಗಿ ಬೆಳೆಯಲು ಪ್ರಾದೇಶಿಕ ಪತ್ರಿಕೆಯಲ್ಲಿ ತುಂಬಾ ಅವಕಾಶಗಳಿವೆ ಇದನ್ನು ಬಳಸಿಕೊಂಡು ಸಮಾಜಮುಖಿಯಾಗಿ ಕಾರ್ಯ ನಿರ್ವಹಿಸುವ ಜವಾಬ್ಧಾರಿ ನಮ್ಮೆಲ್ಲರ ಮೇಲಿದೆ ಎಂದರು. ಕರ್ನಾಟಕ ನವ ನಿರ್ಮಾಣ ಸೇನೆಯ ತಾಲೂಕ ಅಧ್ಯಕ್ಷ ಸಚಿನ್ ಲೆಂಕೆನ್ನವರ ಮಾತನಾಡಿ ನೂತನ ಸಂಘದ ಕಾರ್ಯ ವೈಖರಿ ಕುರಿತು ಶ್ಲಾಘಿಸಿ, ಶುಭವನ್ನು ಕೋರಿದರು. ಸಭೆಯ ಅಧ್ಯಕ್ಷತೆಯನ್ನು ಮೂಡಲಗಿ ತಾಲೂಕ ಪ್ರಾದೇಶಿಕ ಪತ್ರಕರ್ತ ಸಂಘದ ಅಧ್ಯಕ್ಷ ಸುಭಾಸ್ ಕಡಾಡಿ ವಹಿಸಿದ್ದರು.
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಪುರಸಭೆ ಅಧ್ಯಕ್ಷ ಹನುಮಂತ ಗುಡ್ಲಮನಿ, ಉಪಾಧ್ಯಕ್ಷೆ ರೇಣುಕಾ ಹಾದಿಮನಿ, ಉಪ ತಹಶೀಲ್ದಾರ ಶಿವಾನಂದ ಬಬಲಿ, ಆರೋಗ್ಯ ಕೇಂದ್ರದ ಮುಖ್ಯ ವೈದ್ಯಾಧಿಕಾರಿ ಡಾ.ಭಾರತಿ ಕೋಣಿ, ಪಶು ಆಸ್ಪತ್ರೆ ಮುಖ್ಯ ವೈದ್ಯಾಧಿಕಾರಿ ಡಾ.ಎಂ.ಬಿ ವಿಭೂತಿ, ಸಿಡಿಪಿಓ ಯಲ್ಲಪ್ಪ ಗದಾಡಿ, ಪುರಸಭೆ ಅಧಿಕಾರಿ ಸಿ.ಬಿ ಪಾಟೀಲ್, ಪತ್ರಕರ್ತರಾದ ಕೃಷ್ಣಗಿರೆನ್ನವರ, ಅಕ್ಬರ್ ಫೀರಜಾದೆ, ಉಮೇಶ್ ಬೆಳಕೂಡ, ಶಿವಾನಂದ ಮುಧೋಳ, ಮಲ್ಲು ಬೋಳನವರ, ಭೀಮಶಿ ತಳವಾರ, ಭಗವಂತ ಉಪ್ಪಾರ, ಮೂಡಲಗಿ ತಾಲೂಕ ಪ್ರಾದೇಶಿಕ ಪತ್ರಕರ್ತರ ಸಂಘದ ಗೌರವಾಧ್ಯಕ್ಷ ಮಹಾಲಿಂಗಯ್ಯ ನಂದಗಾವಮಠ, ಉಪಾಧ್ಯಕ್ಷ ಶಿವಬಸು ಗಾಡವಿ, ಕಾರ್ಯದರ್ಶಿ ಲಕ್ಷ್ಮಣ ಮೆಳ್ಳಿಗೇರಿ, ಖಜಾಂಚಿ ವಿನೋದ ಎಮ್ಮಿ, ಪದಾಧಿಕಾರಿಗಳಾದ ಸುನಿಲ ಗಸ್ತಿ, ಸಚಿನ್ ಪತ್ತಾರ್ ,ಆರೋಗ್ಯ ಕೇಂದ್ರದ ಸಿಬ್ಬಂದಿ ಸೇರಿದಂತೆ ಇನ್ನು ಅನೇಕರು ಉಪಸ್ಥಿತರಿದ್ದರು.