ಮೂಡಲಗಿ: ಸಂಗನಕೇರಿ ಮತ್ತು ಸುತ್ತಮುತ್ತಲಿನ ಬಡ ಜನತೆಗೆ ಉತ್ತಮವಾದ ಆರೋಗ್ಯ ಸೇವೆಯನ್ನು ದೊರಕಿಸಿಕೊಡಲು ಸಂಗನಕೇರಿ ಪಟ್ಟಣದಲ್ಲಿ ಸುಸಜ್ಜಿತವಾದ ಸರ್ಕಾರಿ ಆಸ್ಪತ್ರೆಯನ್ನು ನಿರ್ಮಿಸಿಕೊಡಲಾಗುತ್ತಿದೆ ಎಂದು ಶಾಸಕ ಮತ್ತು ಬೆಮುಲ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿಯವರು ತಿಳಿಸಿದರು.
ಶನಿವಾರದಂದು ತಾಲ್ಲೂಕಿನ ಅರಭಾವಿ ಪಟ್ಟಣ ಪಂಚಾಯತ ವ್ಯಾಪ್ತಿಯ ಸಂಗನಕೇರಿ ಪಟ್ಟಣದಲ್ಲಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಿಂದ ಸುಮಾರು 50 ಲಕ್ಷ ರೂಪಾಯಿ ವೆಚ್ಚದಲ್ಲಿ ನೂತನವಾಗಿ
ನಿರ್ಮಾಣವಾಗಲಿರುವ ಸರ್ಕಾರಿ ಆಸ್ಪತ್ರೆಗೆ ಗುದ್ದಲಿಪೂಜೆ ನೆರವೇರಿಸಿ ಮಾತನಾಡಿದರು.
ಸಂಗನಕೇರಿ ಹಾಗೂ ಸುತ್ತಮುತ್ತಲಿನ ನಾಗರೀಕರಿಗೆ ಅದರಲ್ಲೂ ಬಡ ರೋಗಿಗಳಿಗೆ ಅನುಕೂಲ ಕಲ್ಪಿಸಲು ಹೊಸ ಆಸ್ಪತ್ರೆ ನಿರ್ಮಾಣ ಮಾಡಬೇಕೆಂಬುದು ಇಲ್ಲಿನ ಜನತೆಯ ಆಶಯವಾಗಿತ್ತು. ಅದರಂತೆ ಆರೋಗ್ಯ ಇಲಾಖೆ ಅನುದಾನದಡಿ ಇದಕ್ಕಾಗಿ 50 ಲಕ್ಷ ರೂಪಾಯಿಗಳನ್ನು ಮಂಜೂರು ಮಾಡಿಸಲಾಗಿದೆ. ಮುಂದಿನ ದಿನಗಳಲ್ಲಿ ಸಂಗನಕೇರಿ ಜನತೆಗೆ ಉತ್ತಮವಾದ ಗುಣಮಟ್ಟದ ಆರೋಗ್ಯ ಸೇವೆಯು ಪ್ರಾಪ್ತಿಯಾಗಲಿದೆ ಎಂದು ಹೇಳಿದರು.
ಅರಭಾವಿ ಪಟ್ಟಣದ ಅಭಿವೃದ್ಧಿಗೆ ಅನೇಕ ರೀತಿಯ ಯೋಜನೆಗಳನ್ನು ಹಾಕಿಕೊಳ್ಳಲಾಗಿದೆ. ಜನರಿಗೆ ಅಗತ್ಯವಿರುವ ಎಲ್ಲ ಸೌಕರ್ಯಗಳನ್ನು ಒದಗಿಸಿಕೊಡುವ ಪ್ರಾಮಾಣಿಕ ಪ್ರಯತ್ನವನ್ನು ಮಾಡಲಾಗುತ್ತಿದೆ. ನಮ್ಮ ಬಿಜೆಪಿ ಸರ್ಕಾರವಿದ್ದ ಸಂದರ್ಭದಲ್ಲಿ ಅಭಿವೃದ್ಧಿಗೆ ಒತ್ತು ನೀಡಿ ಆ ನಿಟ್ಟಿನಲ್ಲಿ ನಾವು ಕೆಲಸವನ್ನು ಮಾಡುತ್ತಿದ್ದೇವು. ಆದರೀಗ ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷವು ಅಧಿಕಾರದಲ್ಲಿರುವುದರಿಂದ ಪ್ರಗತಿ ಕೆಲಸಗಳು ನಿಧಾನವಾಗಿ ನಡೆಯುತ್ತಿವೆ ಎಂದು ತಿಳಿಸಿದರು.
ಶಾಸಕ ಬಾಲಚಂದ್ರ ಜಾರಕಿಹೊಳಿಯವರು ಇದೇ ಸಂದರ್ಭದಲ್ಲಿ 50 ಲಕ್ಷ ರೂಪಾಯಿ ವೆಚ್ಚದ ಆರೋಗ್ಯ ಮತ್ತು ಕ್ಷೇಮ ಕೇಂದ್ರದ ನೂತನ ಕಟ್ಟಡಕ್ಕೆ ಗುದ್ದಲಿಪೂಜೆ ನೆರವೇರಿಸಿದರು.
ವೇಮೂ. ಶಿವಯ್ಯ ಸ್ವಾಮಿಗಳು ಪೂಜಾ ಕಾರ್ಯಗಳನ್ನು ನೆರವೇರಿಸಿದರು.
ಈ ಸಂದರ್ಭದಲ್ಲಿ ಶಂಕರ ಬಿಲಕುಂದಿ, ಮುತ್ತೆಪ್ಪ ಜಲ್ಲಿ, ನಿಂಗಪ್ಪ ಇಳಗೇರ, ಬಿ.ಟಿ. ಸಂಪಗಾಂವಿ, ಬಸು ಮಾಳೆದವರ, ಭೀಮಶಿ ಮಾಳದವರ, ಮೀರಾಸಾಬ ಮುಲ್ಲಾ, ರಮೇಶ ಬಬಲಿ, ಹಣಮಂತ ಕಂದಾರಿ, ಸತ್ತೆಪ್ಪ ಮೆಳವಂಕಿ, ಸುರೇಶ ದೊಡ್ಡಲಿಂಗನವರ, ಅಡಿವೆಪ್ಪ ಬಿಲಕುಂದಿ, ಕೆಂಚಪ್ಪ ಮಂಟೂರ, ಗಂಗನ್ನವರ,
ಕೃಷ್ಣಾ ಇಳಿಗೇರ, ಸಂಜು ಮಾದರ, ನಾನಪ್ಪಗೋಳ, ಬಸವರಾಜ ಜಕ್ಕಾನಟ್ಟಿ, ವೀರಭದ್ರ ಮಾಡಲಗಿ, ಸಂಜಯ ಜಾಗನೂರ, ಸಾತಪ್ಪ ಚಿಕ್ಕೋಡಿ, ಪ.ಪಂ. ಮುಖ್ಯಾಧಿಕಾರಿ ವಿನಾಯಕ ಬಬಲೇಶ್ವರ, ಆರೋಗ್ಯ ಇಲಾಖೆಯವರು
ಸೇರಿದಂತೆ ಅನೇಕರು ಉಪಸ್ಥಿತರಿದ್ದರು.
ಕಾರ್ಗಿಲ್ ವಿಜಯೋತ್ಸವ ಆಚರಣೆ
ಶಾಸಕ ಬಾಲಚಂದ್ರ ಜಾರಕಿಹೊಳಿಯವರು ಮೂಡಲಗಿ ತಾಲ್ಲೂಕು ಮಾಜಿ ಸೈನಿಕರ ಸಂಘವು ಹಮ್ಮಿಕೊಂಡ ಕಾರ್ಗಿಲ್ ವಿಜಯೋತ್ಸವ ಮತ್ತು ಆಪರೇಶನ್ ಸಿಂಧೂರ ಕಾರ್ಯಕ್ರಮದಲ್ಲಿ ಭಾಗಿಯಾಗಿ ವೀರಯೋಧರನ್ನು ಸ್ಮರಿಸಿ ಮಾತನಾಡಿದರು. ಸೈನಿಕರು ಮತ್ತು ರೈತರು ನಮ್ಮ ದೇಶದ ಎರಡು ಕಣ್ಣುಗಳಿದ್ದಂತೆ ಎಂದು ತಿಳಿಸಿದರು.
ಮಾಜಿ ಸೈನಿಕರ ಸಂಘದ ಪದಾಧಿಕಾರಿಗಳು ಮತ್ತು ಸದಸ್ಯರು ಉಪಸ್ಥಿತರಿದ್ದರು