ಮೂಡಲಗಿ: ಅರಭಾವಿ ಕಿತ್ತೂರ ರಾಣಿ ಚನ್ನಮ್ಮ ತೋಟಗಾರಿಕೆ ಮಹಾವಿದ್ಯಾಲಯ ವಿಜ್ಞಾನಿಗಳಾದ ಡಾ. ಕಾಂತರಾಜು.ವಿ. ಮತ್ತು ಡಾ. ಸುಹಾಸಿನಿ ಜಾಲವಾದಿ ಅವರು ಬಾಳೆ ಬೆಳೆಗೆ ಹೆಚ್ಚಾಗಿ ಕಂಡು ಬಂದಿರುವ ಎಲೆ ಚುಕ್ಕೆ ರೋಗವನ್ನು ಪರಿಸಿಲಿಸುತ್ತಿರುವದು.
ಮಳೆಯಿಂದಾಗಿಬಾಳೆ ಬೆಳೆಯ
ಎಲೆ ಚುಕ್ಕೆ ರೋಗದ ಬಾಧೆಗೆ ರೈತರಿಗೆ ಸಲಹೆ
ಮೂಡಲಗಿ: ಬಾಗಲಕೋಟ ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯದ ಅರಭಾವಿ ಕಿತ್ತೂರ ರಾಣಿ ಚನ್ನಮ್ಮ ತೋಟಗಾರಿಕೆ ಮಹಾವಿದ್ಯಾಲಯ ಮತ್ತು ಭಾರತೀಯ ಕೃಷಿ ಅನುಸಂಧಾನ ಪರಿಷತ್ – ಅಖಿಲ ಭಾರತೀಯ ಸಮನ್ವಯ ಸಂಶೋಧನಾ ಯೋಜನೆ ವಿಭಾಗದ ವಿಜ್ಞಾನಿಗಳಾದ ಡಾ. ಕಾಂತರಾಜು.ವಿ. ಮತ್ತು ಡಾ. ಸುಹಾಸಿನಿ ಜಾಲವಾದಿ ಅವರು ಬಾಳೆ ಬೆಳೆಗೆ ಹೆಚ್ಚಾಗಿ ಕಂಡು ಬಂದಿರುವ ಸಿಗಾಟೋಕ (ಯುಮೋಸಿಯೆ) ಎಲೆ ಚುಕ್ಕೆ ರೋಗಕ್ಕೆ ಸೂಕ್ತ ಸಲಹೆಗಳನ್ನು ನೀಡಿದ್ದಾರೆ.
ಈ ಭಾಗದಲ್ಲಿ ಸತತವಾಗಿ ಮಳೆಯಾಗುತ್ತಿರುವುದರಿಂದ, ವಾತಾವರಣದ ಆದ್ರತೆ ಹೆಚ್ಚಾಗಿ ತಂಪು ವಾತಾವರಣ ಇರುವುದರಿಂದ ಈ ರೋಗವು ಈ ಭಾಗದ ಮುಖ್ಯ ತಳಿಗಳಾದ ಗ್ರ್ಯಾಂಡ್ ನೈನ್ (ಜಿ-9) ಮತ್ತು ರಾಜಾಪುರಿ (ಜವಾರಿ) ತಳಿಗಳಲ್ಲಿ ಹೆಚ್ಚಾಗಿ ಕಂಡು ಬಂದಿದೆ. ಸಾಮಾನ್ಯವಾಗಿ ವಾತಾವರಣದ ಅನುಕೂಲಕ್ಕೆ ತಕ್ಕಂತೆ ಜುಲೈಯಿಂದ ಫೆಬ್ರವರಿ ತಿಂಗಳುವರೆಗೂ ಈ ರೋಗ ಹೆಚ್ಚಾಗಿ ಕಂಡು ಬರುತ್ತದೆ. ಮೊದಲಿಗೆ ಗಿಡದ ಹಳೆಯ ಎಲೆಗಳ ಮೇಲೆ ಬೂದು ಬಣ್ಣದಿಂದ ಕೂಡಿದ ಕಪ್ಪನೆಯ ಚುಕ್ಕೆಗಳು ಕಂಡುಬಂದು, ಎಲೆಗಳು ಒಣಗಲು ಪ್ರಾರಂಭವಾಗುತ್ತವೆ. ಇದರಿಂದ ಗೊನೆಗಳು ಸರಿಯಾಗಿ ಬೆಳೆವಣಿಗೆಯಾಗುವುದಿಲ್ಲ ಮತ್ತು ಗೊನೆಯ ಗಾತ್ರ ಕಡಿಮೆಯಾಗುತ್ತದೆ. ರೋಗದ ತೀವ್ರತೆ ಹೆಚ್ಚಾಗುವುದಕ್ಕೆ, ಹೆಚ್ಚು ಸಾಂದ್ರತೆಯಿಂದ ಗಿಡಗಳನ್ನು ನಾಟಿ ಮಾಡುವುದು, ರೋಗ ಪೀಡಿತ ಎಲೆಗಳನ್ನು ಗಿಡದಿಂದ ತೆಗೆಯದಿರುವುದು, ರೋಗ ಪೀಡಿತ ಎಲೆಗಳನ್ನು ತೆಗೆದು ಬಾಳೆ ಸಾಲುಗಳ ಮಧೆÀ್ಯ ಹಾಕುವುದು, ಕಾಲುವೆ ಮುಖಾಂತರ ಗಿಡಗಳಿಗೆ ಹೆಚ್ಚು ನೀರು ಹಾಯಿಸುವುದು, ಹೆಚ್ಚಾಗಿ ಮಳೆ,ಪ್ರವಾಹ ಉಂಟಾದಾಗ ತೋಟದಿಂದ ನೀರು ಬಸಿದು ಹೋಗದಿರುವದು, ಸರಿಯಾದ ಸಮಯಕ್ಕೆ ಸಿಂಪರಣೆ ಮಾಡದಿರುವುದು ಕಾರಣಗಳಾಗಿರುತ್ತವೆ.
ಈ ರೋಗದ ಹತೋಟಿಗೆ ರೈತರು, ನೀರು ಚೆನ್ನಾಗಿ ಬಸಿದು ಹೋಗುವಂತ ಮಣ್ಣಿನಲ್ಲಿ ಬಾಳೆ ಬೆಳೆಯುವುದು ಸೂಕ್ತ. ಶಿಫಾರಿಸಿದ ಅಂತರದಲ್ಲಿ ನಾಟಿ ಮಾಡಬೇಕು. ರೋಗಪೀಡಿತ ಒಣಗಿದ ಎಲೆಗಳನ್ನು ಎರಡು ಮತ್ತು ಮೂರು ತಿಂಗಳಿಗೊಮ್ಮೆ ಕೊಯ್ದು ಬಾಳೆ ಸಾಲುಗಳ ಮದ್ಯೆ ಯಾವುದೇ ಕಾರಣಕ್ಕೂ ಹಾಕಬಾರದು ಮತ್ತು ಗಿಡಗಳಿಗೆ ಸುತ್ತಬಾರದು. ರೋಗ ಕಂಡು ಬಂದಾಗ, ಪ್ರೋಪಿಕೋನಜೋಲ್ @ 0.5 ಮಿ.ಲೀ. ಮತ್ತು ಪೆಟ್ರೋಲಿಯಂ ಆಧಾರಿತ ಮಿನರಲ್ ಎಣ್ಣೆ @ 10 ಮಿ.ಲೀ. ಪ್ರತಿ ಲೀಟರ್ ನೀರಿಗೆ ಬೆರೆಸಿ 15-20 ದಿನಗಳ ಅಂತರದಲ್ಲಿ ಮೂರು ಬಾರಿ ಸಿಂಪರಣೆ ಮಾಡಬೇಕು.