ಶಾಂತಿ,ಸೌಹಾರ್ದತೆಯಿಂದ ಹೋಳಿ ಹಬ್ಬ ಆಚರಿಸಬೇಕು:ಪಿಎಸ್‍ಐ ಗೋವಿಂದಗೌಡ ಪಾಟೀಲ
ಬೆಟಗೇರಿ:ಸ್ಥಳೀಯ ಸರ್ವ ಸಮುದಾಯದವರು ಶಾಂತಿ ಸೌಹಾರ್ದತೆಯಿಂದ ಹೋಳಿ ಹಬ್ಬ ಆಚರಿಸಬೇಕು. ಬಣ್ಣದಾಟದಲ್ಲಿ ನೈಸರ್ಗಿಕ ಬಣ್ಣ ಬಳಕೆ ಮಾಡಬೇಕು ಎಂದು ಕುಲಗೋಡ ಪೊಲೀಸ್ ಠಾಣೆ ಪಿಎಸ್.ಐ ಗೋವಿಂದಗೌಡ ಪಾಟೀಲ ಹೇಳಿದರು.
ಬೆಳಗಾವಿ ಜಿಲ್ಲಾ ಪೊಲೀಸ್ ಇಲಾಖೆ, ಮೂಡಲಗಿ ಹಾಗೂ ಕುಲಗೋಡ ಪೊಲೀಸ್ ಠಾಣೆಯ ಸಹಯೋಗದಲ್ಲಿ ಹೋಳಿ ಹಬ್ಬದ ಪ್ರಯುಕ್ತ ಗೋಕಾಕ ತಾಲೂಕಿನ ಕೌಜಲಗಿ ಗ್ರಾಮದಲ್ಲಿ ಈಚೆಗೆ ನಡೆದ ಶಾಂತಿಪಾಲನಾ ಸಭೆಯಲ್ಲಿ ಮಾತನಾಡಿ, ಹೋಳಿ ಹಬ್ಬದ ಯಶಸ್ವಿಗೆ ಕುಲಗೋಡ ಪೊಲೀಸ್ ಠಾಣೆ ವ್ಯಾಪ್ತಿಯ ಕೌಜಲಗಿ ಸೇರಿದಂತೆ ಎಲ್ಲಾ ಹಳ್ಳಿಗಳ ಎಲ್ಲಾ ಸಮುದಾಯದ ಹಿರಿಯ ನಾಗರಿಕರ, ಯುವಕರ ಹಾಗೂ ಸಾರ್ವಜನಿಕರು ಸಹಕಾರ ಅಗತ್ಯವಾಗಿದೆ ಎಂದರು.
ತಮ್ಮ ಗ್ರಾಮಗಳಿಗೆ ಬೇರೆ ಗ್ರಾಮದಿಂದ ಬಂದು ಹೋಗುವ ಅಪರಿಚಿತರಿಗೆ, ಆಸ್ಪತ್ರೆಗೆ ಬರುವ ರೋಗಿಗಳಿಗೆ, ಮಹಿಳೆಯರಿಗೆ ಸ್ಥಳೀಯರು ಒತ್ತಾಯ ಪೂರ್ವಕ ಬಣ್ಣ ಎರಚಬಾರದು. ಇಂತಹ ಜನರಿಗೆ ಬಣ್ಣ ಎರಚಿದವರ, ಹಚ್ಚಿದವರ ಮೇಲೆ ಸೂಕ್ತ ಕಾನೂನು ಕ್ರಮಕೈಗೊಳ್ಳಲಾಗುವುದು ಎಂದು ಪಿಎಸ್‍ಐ ಗೋವಿಂದಗೌಡ ಪಾಟೀಲ ಸೂಚನೆ ನೀಡಿದ್ದಾರೆ.
ಜಿಪಂ ಮಾಜಿ ಸದಸ್ಯ ಡಾ.ರಾಜೇಂದ್ರ ಸಣ್ಣಕ್ಕಿ, ಎಂ.ಆರ್.ಭೋವಿ, ಶಿವು ಲೋಕನ್ನವರ, ರವಿ ಪರುಶೆಟ್ಟಿ, ಗ್ರಾಪಂ ಮಾಜಿ ಅಧ್ಯಕ್ಷ ಅಶೋಕ ಉದ್ದಪ್ಪನ್ನವರ, ಮಹೇಶ ಪಟ್ಟಣಶೆಟ್ಟಿ, ಸುಭಾಷ ಕೌಜಲಗಿ, ಮಹಾದೇವ ಬುದ್ನಿ, ದಸ್ತಗೀರ ಮುಲ್ತಾನಿ, ರಾಯಪ್ಪ ಬಲೊದಾರ, ಪರಮೇಶ್ವರ ಹೊಸಮನಿ, ನೀಲಪ್ಪ ಕೇವಟಿ, ಕೌಜಲಗಿ ಗ್ರಾಮದ ಬೀಟ್‍ಪೇದೆಗಳಾದ ಮಲ್ಲಪ್ಪ ಆಡಿನ, ಕಲ್ಮೇಶ ಬಾಗಲಿ, ಗಣ್ಯರು, ಸ್ಥಳೀಯರು ಇದ್ದರು.