ಮೂಡಲಗಿ: ಕೇಂದ್ರೀಯ ಪ್ರಾಯೋಜಿತ ಪ್ರಧಾನ ಮಂತ್ರಿ ಮೈಕ್ರೋ ಫುಡ್ ಪ್ರೊಸೆಸಿಂಗ್ ಎಂಟರ್‍ಪ್ರೈಸಸ್ (ಪಿ.ಎಂ.ಎಫ್.ಎಂ.ಇ) ಯೋಜನೆಯಡಿ ಕರ್ನಾಟಕದ 30 ಜಿಲ್ಲೆಗಳಿಗೆ ಒಂದು ಜಿಲ್ಲೆ ಒಂದು ಉತ್ಪನ್ನ ಯೋಜನೆಯಡಿ 21 ವಿಶಿಷ್ಟ ಉತ್ಪನ್ನಗಳನ್ನು ಅನುಮೋದಿಸಲಾಗಿದೆ ಎಂದು ಆಹಾರ ಸಂಸ್ಕರಣಾ ಕೈಗಾರಿಕೆಗಳ ಇಲಾಖೆ ಸಚಿವ ಪಶುಪತಿ ಕುಮಾರ ಪರಸ ಅವರು ಉತ್ತರಿಸಿದ್ದಾರೆ ಎಂದು ಸಂಸದ ಈರಣ್ಣ ಕಡಾಡಿ ಅವರು ಹೇಳಿದರು.
ರಾಜ್ಯ ಸಭೆಯ ಚಳಿಗಾಲದ ಅಧಿವೇಶನದಲ್ಲಿ ಪ್ರಧಾನ ಮಂತ್ರಿ ಮೈಕ್ರೋ ಫುಡ್ ಪ್ರೊಸೆಸಿಂಗ್ ಎಂಟರ್‍ಪ್ರೈಸಸ್ (ಪಿ.ಎಂ.ಎಫ್.ಎಂ.ಇ) ಯೋಜನೆ ಒಂದು ಜಿಲ್ಲೆ ಒಂದು ಉತ್ಪನ್ನಗಳ ಕುರಿತು ಕೇಳಿದ ಚುಕ್ಕೆ ಗುರುತಿನ ಪ್ರಶ್ನೆಗೆ ಉತ್ತರಿಸಿದ ಸಚಿವರು 137 ವಿಶಿಷ್ಟ ಉತ್ಪನ್ನಗಳನ್ನು ಒಳಗೊಂಡಿರುವ (ಪಿ.ಎಂ.ಎಫ್.ಎಂ.ಇ) ಯೋಜನೆಯಡಿ 35 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ 713 ಜಿಲ್ಲೆಗಳಿಗೆ ಒಂದು ಜಿಲ್ಲೆ ಒಂದು ಉತ್ಪನ್ನ ಯೋಜನೆಯಡಿ ಅನುಮೊದಿಸಲಾಗಿದೆ. ಇದರೊಂದಿಗೆ 216 ಸಮಗ್ರ ಬುಡಕಟ್ಟು ಅಭಿವೃದ್ಧಿ ಪ್ರದೇಶಗಳು ಮತ್ತು 40% ಕ್ಕಿಂತ ಹೆಚ್ಚು ಎಸ್.ಸಿ ಜನಸಂಖ್ಯೆ ಹೊಂದಿರುವ 35 ಜಿಲ್ಲೆಗಳನ್ನು ಡಿಜಿಟಲ್ ನಕ್ಷೆಯಲ್ಲಿ ಸೂಚಿಸಲಾಗಿದೆ ಎಂದರು.
ಕೃಷಿ ಉತ್ಪನ್ನಗಳನ್ನು ಉತ್ತೇಜಿಸುವ ಜೊತೆಗೆ ರೈತರಿಗೆ ಹೆಚ್ಚಿನ ಪ್ರೋತ್ಸಾಹ ನೀಡುವ ಸಲುವಾಗಿ ಈ ಯೋಜನೆಯಡಿ ರಾಜ್ಯದ 30 ಜಿಲ್ಲೆಗಳಿಗೂ ಒಂದೊಂದು ಬೆಳೆ ನಿಗದಿ ಮಾಡಿ ಬೆಳಗಾವಿ, ಬಾಗಲಕೊಟೆ ಮತ್ತು ಮಂಡ್ಯ -ಕಬ್ಬು (ಬೆಲ್ಲ), ಬಳ್ಳಾರಿ-ಅಂಜೂರ, ಬೆಂಗಳೂರು ಗ್ರಾಮಾಂತರ-ಕೋಳಿ ಉತ್ಪನ್ನಗಳು, ಬೆಂಗಳೂರು ನಗರ- ಬೇಕರಿ ತಿಂಡಿ ತಿನಿಸು ಉತ್ಪನ್ನಗಳು, ಬೀದರ-ಶುಂಠಿ, ಚಾಮರಾಜನಗರ-ಅರಿಶೀನ ಉತ್ಪನ್ನ, ಕೋಲಾರ ಮತ್ತು ಚಿಕ್ಕಬಳ್ಳಾಪೂರ-ಟೊಮ್ಯಾಟೋ, ಉತ್ತರ ಕನ್ನಡ ಮತ್ತು ಚಿಕ್ಕಮಗಳೂರು-ಮೆಣಸು ಮತ್ತು ಸಾಂಬಾರು ಪದಾರ್ಥ, ಚಿತ್ರದುರ್ಗ-ಕಡಲೆಕಾಯಿ, ಉಡುಪಿ ಮತ್ತು ದಕ್ಷಿಣಕನ್ನಡ- ಮೀನು ಸೇರಿದಂತೆ ಸಮುದ್ರ ಉತ್ಪನ್ನಗಳು, ದಾವಣಗೆರೆ-ಸಿರಿಧಾನ್ಯ, ಗದಗ–ಬ್ಯಾಡಗಿ ಮೆಣಸಿನಕಾಯಿ, ಕೊಡಗು– ಕಾಫಿ, ತುಮಕೂರು, ಹಾಸನ ಮತ್ತು ರಾಮನಗರ–ತೆಂಗು (ಕೊಬ್ಬರಿ ಉತ್ಪನ್ನ), ಧಾರವಾಡ ಮತ್ತು ಹಾವೇರಿ–ಮಾವು, ಕಲಬುರಗಿ–ತೊಗರಿ, ಕೊಪ್ಪಳ–ಸೀಬೆ ಹಣ್ಣು, ಮೈಸೂರು– ಬಾಳೆಹಣ್ಣು, ರಾಯಚೂರು–ಮೆಣಸಿನಕಾಯಿ, ಶಿವಮೊಗ್ಗ–ಪೈನಾಪಲ್, ಶಿರಸಿ–ಜೇನು, ವಿಜಯಪುರ–ನಿಂಬೆಹಣ್ಣು, ಯಾದಗಿರಿ– ಕಡಲೆಕಾಯಿ ಈ ಉತ್ಪನ್ನಗಳನ್ನು ಘೋಷಿಸಲಾಗಿದೆ ಎಂದು ಸಚಿವರು ಉತ್ತರಿಸಿದ್ದಾರೆ ಎಂದು ಸಂಸದರು ಮಾಹಿತಿ ಹಂಚಿಕೊಂಡರು.
