ಅಂಕಲಗಿ ಮಾತಿಗೆ ಈರಪ್ಪ ಬೆಳಕೂಡ ಖಂಡನೆ
ಮೂಡಲಗಿ: ಇತ್ತಿಚೆಗೆ ಬಾಗೇವಾಡಿಯಲ್ಲಿ ಜರುಗಿದ ವಿಧಾನ ಪರಿಷತ ಚುನಾವಣೆಯ ಪ್ರಚಾರದಲ್ಲಿ ಪಂಚಮಸಾಲಿ ಲಿಂಗಾಯತ ಶ್ರೀಗಳೊಬ್ಬರು ಫೋನ್ ಮೂಲಕ ಲಿಂಗಾಯತರಿಗೆ ಪ್ರಾಧಾನ್ಯತೆ ನೀಡುವಂತೆ ಒತ್ತಾಯಿಸಿದ್ದಾರೆ ಎಂದು ಆರೋಪಿಸಿದ ಬಿಡಿಸಿಸಿ ಬ್ಯಾಂಕಿನ ನಿರ್ದೇಶಕ ರಾಜೇಂದ್ರ ಅಂಕಲಗಿ ಯಾವ ಶ್ರೀಗಳು ಎಂದು ಹೇಳಬೇಕು. ಶ್ರೀಗಳ ಬಗ್ಗೆ ಮತ್ತು ಲಿಂಗಾಯತರ ಬಗ್ಗೆ ಹಗುರವಾಗಿ ಮಾತನಾಡಿದ ಅವರು ಕೊಡಲೆ ಕ್ಷಮೆಯಾಚಿಸಬೇಕು ಎಂದು ಪಂಚಮಸಾಲಿ ಲಿಂಗಾಯತ ಸಮಾಜದ ರಾಜ್ಯ ಉಪಾಧ್ಯಕ್ಷ ಕಲ್ಲೋಳಿಯ ಈರಪ್ಪ ಬೆಳಕೂಡ ಆಗ್ರಹಿಸಿದ್ದಾರೆ.
ಮಂಗಳವಾರ ಪತ್ರಿಕಾ ಪ್ರಕಟನೆ ಮೂಲಕ ಆಗ್ರಹಿಸಿರುವ ಅವರು ಯಾರನ್ನೋ ಓಲೈಸಲು ಮತ್ತು ತಮ್ಮ ರಾಜಕಾರಣದ ಬೇಳೆ ಬೇಯಿಸಿಕೋಳ್ಳಲು ಶ್ರೀಗಳು ಫೋನ್ ಮೂಲಕ ಲಿಂಗಾಯತರಿಗೆ ಮತ ನೀಡುವಂತೆ ತಮಗೆ ಹೇಳಿದ್ದಾರೆ ಎಂದು ತಮ್ಮ ಭಾಷಣದಲ್ಲಿ ಶ್ರೀಗಳ ಬಗ್ಗೆ ಅವಹೇಳನ ಮಾಡಿರುವುದಲ್ಲದೆ ಪಂಚಮಸಾಲಿ ಸಮಾಜಕ್ಕೂ ಅವಮಾನ ಮಾಡಿದ್ದು ಇದನ್ನು ತೀವ್ರವಾಗಿ ಖಂಡಿಸುತ್ತೇವೆ ಎಂದು ತಿಳಿಸಿದ್ದಾರೆ.
ಶ್ರೀಗಳು ರಾಜಕಾರಣ ಮಾಡಬಾರದು ಎಂದು ಹೇಳಿರುವ ಅಂಕಲಗಿ ಅವರು ತಮ್ಮ ಸಹೋದರನಿಗೆ ಕಾಂಗ್ರೆಸ ಪಕ್ಷದಿಂದ ಲಾಭ ಪಡೆಯುವಾಗ ನನ್ನ ಹತ್ತಿರ ಮತ್ತು ಪಂಚಮಸಾಲಿ ಶ್ರೀಗಳ ಹತ್ತಿರ ಶಿಪಾರಸ್ಸು ಪತ್ರವನ್ನು ಪಡೆದುಕೊಂಡಿರುವುದನ್ನು ಅಂಕಲಗಿ ಅವರು ನೆನಪಿಸಿಕೊಳ್ಳಬೇಕು ಎಂದಿದ್ದಾರೆ.
ಜಾತಿ, ಧರ್ಮದ ಬಗ್ಗೆ ದೊಡ್ಡ ವ್ಯಾಖ್ಯಾನ ಮಾಡುವ ರಾಜೇಂದ್ರ ಅಂಕಲಗಿ ಅವರು ಶ್ರೀಗಳ ಹೆಸರನ್ನು ಹೇಳಿಲ್ಲ ಎನ್ನುವ ಅವರು ಸಾರ್ವಜನಿಕ ವೇದಿಕೆಯಲ್ಲಿ ಯಾವ ಶ್ರೀಗಳ ಬಗ್ಗೆ ತುಚ್ಛವಾಗಿ ಮಾತನಾಡಿರುವ ಬಗ್ಗೆ ಬಹಿರಂಗಪಡಿಸಿಬೇಕು ಎಂದು ಒತ್ತಾಯಿಸಿದ್ದಾರೆ.
ಪಂಚಮಸಾಲಿ ಶ್ರೀಗಳ ಹೆಸರನ್ನು ತೆಗೆದುಕೊಳ್ಳದಿದ್ದರೂ ಅವರನ್ನೇ ಕುರಿತು ಮಾತನಾಡಿರುವುದು ಸ್ಪಷ್ಟವಾಗುತ್ತದೆ. ಶ್ರೀಗಳ ಬಗ್ಗೆ ಹಗುರವಾಗಿ ಮಾತನಾಡಿರುವ ಅಂಕಲಗಿ ಅವರು ಅದೇ ವೇದಿಕೆಯ ಮೇಲೆ ಕ್ಷಮೆಯಾಚಿಸಬೇಕು. ಇಲ್ಲದಿದ್ದರೆ ಮುಂದಿನ ದಿನಗಳಲ್ಲಿ ಲಿಂಯಾಯತ ಸಮಾಜದಿಂದ ಬೃಹತ್ ಪ್ರತಿಭಟನೆ ಮಾಡಲಾಗುವುದು ಎಂದು ಬೆಳಕೂಡ ಅವರು ಎಚ್ಚರಿಸಿದ್ದಾರೆ.