ರೈತರು ಸಾಲಕ್ಕೆ ಹೆದರದೇ ಧೈರ್ಯವಾಗಿ ಜೀವನ ಸಾಗಿಸಿ : ಶಾಸಕ ಬಾಲಚಂದ್ರ ಜಾರಕಿಹೊಳಿ
ಮೂಡಲಗಿ : ಮಾನವ ಜನ್ಮ ಪವಿತ್ರವಾದದ್ದು. ಜೀವನವೆಂದ ಮೇಲೆ ಪ್ರತಿಯೊಬ್ಬರಿಗೂ ಕಷ್ಟಗಳು ಬಂದೇ ಬರುತ್ತವೆ. ಜೊತೆಗೆ ಸಾಲವೂ ಕೂಡ ಇದ್ದೇ ಇರುತ್ತದೆ. ಧೈರ್ಯದಿಂದ ಜೀವನವನ್ನು ಸಾಗಿಸಬೇಕೇ ಹೊರತು ಆತ್ಮಹತ್ಯೆಯಂತಹ ಹೀನ ಕೃತ್ಯಕ್ಕೆ ಯಾರೂ ಕೈ ಹಾಕಬಾರದು ಎಂದು ಶಾಸಕ ಬಾಲಚಂದ್ರ ಜಾರಕಿಹೊಳಿ ತಿಳಿಸಿದರು.
ಪಟ್ಟಣದ ತಹಶೀಲ್ದಾರ ಕಛೇರಿ ಆವರಣದಲ್ಲಿ ಸಾಲದ ಬಾಧೆಗೆ ಹೆದರಿ ಆತ್ಮಹತ್ಯೆಗೆ ಶರಣಾದ 4 ರೈತ ಕುಟುಂಬಗಳ ವಾರಸುದಾರರಿಗೆ ತಲಾ 5 ಲಕ್ಷ ರೂ.ಗಳ ಧನಾದೇಶ ಪತ್ರಗಳನ್ನು ವಿತರಿಸಿ ಮಾತನಾಡಿದ ಅವರು, ಆತ್ಮಹತ್ಯೆಯೊಂದೇ ಪರಿಹಾರವಲ್ಲವೆಂದು ಹೇಳಿದರು.
ಮನೆಯ ಯಜಮಾನ ಆತ್ಮಹತ್ಯೆ ಮಾಡಿಕೊಂಡರೆ ಇಡೀ ಕುಟುಂಬ ಬೀದಿಗೆ ಬರುತ್ತದೆ. ಅವಲಂಬಿತರಿಗೆ ಅನ್ಯಾಯ ಮಾಡಿದಂತಾಗುತ್ತದೆ. ಆದ್ದರಿಂದ ರೈತರು ಎಷ್ಟೇ ಸಾಲ-ಸೂಲ ಮಾಡಿದರೂ ಅವುಗಳಿಗೆ ಹೆದರದೇ ಧೈರ್ಯದಿಂದ ಎದುರಿಸಬೇಕು. ಹೊರತು ಆತ್ಮಹತ್ಯೆ ಮಾಡಿಕೊಳ್ಳುವದಲ್ಲವೆಂದು ತಿಳಿಸಿದರು.
ಶಾಸಕ ಬಾಲಚಂದ್ರ ಜಾರಕಿಹೊಳಿ ಅವರು ಆತ್ಮಹತ್ಯೆಗೆ ಶರಣಾದ ದುರದುಂಡಿ ಗ್ರಾಮದ ಯಲ್ಲಪ್ಪ ಗಂಗಪ್ಪ ಮಾಳ್ಯಾಗೋಳ, ಶಿವಾಪೂರ(ಹ) ಗ್ರಾಮದ ದುಂಡಯ್ಯಾ ಬಸಯ್ಯಾ ಹಿರೇಮಠ, ತುಕ್ಕಾನಟ್ಟಿ ಗ್ರಾಮದ ಸೋಮಪ್ಪ ಬಾಲಪ್ಪ ಹುಲಕುಂದ ಮತ್ತು ಸಂಗನಕೇರಿ ಗ್ರಾಮದ ಹನಮಂತ ಶಿವಪುತ್ರ ಉಪ್ಪಾರ ಇವರ ಕುಟುಂಬದ ವಾರಸುದಾರರಿಗೆ ತಲಾ 5 ಲಕ್ಷ ರೂ.ಗಳ ಧನಾದೇಶ ಪತ್ರಗಳನ್ನು ವಿತರಿಸಿದರು.
ತಹಶೀಲ್ದಾರ ಶಿವಾನಂದ ಬಬಲಿ, ಸಹಾಯಕ ಕೃಷಿ ನಿರ್ದೇಶಕ ಎಂ.ಎಂ. ನದಾಫ, ತಾಪಂ ಕಾರ್ಯನಿರ್ವಾಹಕ ಅಧಿಕಾರಿ ಎಫ್.ಜಿ. ಚಿನ್ನನ್ನವರ, ಸರ್ಕಲ್ ಇನ್ಸ್‍ಪೆಕ್ಟರ್ ಶ್ರೀಶೈಲ ಬ್ಯಾಕೋಡ್, ಸಬ್ ಇನ್ಸ್‍ಪೆಕ್ಟರ್ ಎಚ್.ವಾಯ್. ಬಾಲದಂಡಿ, ಕ್ಷೇತ್ರದ ಮುಖಂಡರು ಸೇರಿದಂತೆ ಅನೇಕರು ಉಪಸ್ಥಿತರಿದ್ದರು.