Breaking News
Home / Recent Posts / ಮಾನವ ಹಕ್ಕುಗಳ ಸಂರಕ್ಷಣೆ ಅವಶ್ಯಕವಾಗಿದೆ: ಪ್ರೊ. ವಿಠ್ಠಲ ಕುರಂದವಾಡ

ಮಾನವ ಹಕ್ಕುಗಳ ಸಂರಕ್ಷಣೆ ಅವಶ್ಯಕವಾಗಿದೆ: ಪ್ರೊ. ವಿಠ್ಠಲ ಕುರಂದವಾಡ

Spread the love

ಮಾನವ ಹಕ್ಕುಗಳ ಸಂರಕ್ಷಣೆ ಅವಶ್ಯಕವಾಗಿದೆ: ಪ್ರೊ. ವಿಠ್ಠಲ ಕುರಂದವಾಡ

 ಮೂಡಲಗಿ : ಮಾನವ ಹುಟ್ಟಿನಿಂದಲೇ ಕೆಲವೊಂದು ಹಕ್ಕುಗಳನ್ನು ಪಡೆದಿದ್ದಾನೆ. ಈ ಜಗತ್ತಿನಲ್ಲಿರುವ ಪ್ರತಿಯೊಂದು ಜೀವಿಗಳಿಗೂ ಬದುಕುವ ಹಕ್ಕಿದೆ. ಸ್ವತಂತ್ರ ಜೀವನವನ್ನು ನಡೆಸುವ ಹಕ್ಕಿದೆ, ಬೇಕಾದ್ದನ್ನು ತಿನ್ನುವ, ವಾಸಿಸುವ, ಎಲ್ಲೆಂದರಲ್ಲಿ ಓಡಾಡುವ ಹಕ್ಕಿದೆ. ಇದನ್ನೇ ಮಾನವ ಹಕ್ಕುಗಳು ಎನ್ನುತ್ತೇವೆ. ಮನುಷ್ಯನಿಗೆ ಮುಖ್ಯವಾಗಿ ಬೇಕಾಗಿರುವುದು ಆಹಾರ, ಉಡುಪು ಮತ್ತು ವಸತಿ. ಇವು ಮನುಷ್ಯನ ಮೂಲಭೂತ ಹಕ್ಕುಗಳು. ಇವುಗಳಿಲ್ಲದೆ ಮನುಷ್ಯ ಜೀವನ ಎಂದಿಗೂ ಕಷ್ಟವೇ. ಈ ಮೂಲಭೂತ ಸವಲತ್ತುಗಳನ್ನು ಪಡೆಯುವುದು ಪ್ರತಿಯೊಬ್ಬ ಪ್ರಜೆಯ ಜನ್ಮಸಿದ್ಧ ಹಕ್ಕಾಗಿದೆ. ಈ ಹಕ್ಕುಗಳ ಉಲ್ಲಂಘನೆ ಆದಾಗ ಕಾನೂನಿನ ಮೂಲಕ ಪರಿಹಾರ ಕಂಡುಕೊಳ್ಳಬಹುದು ಎಂದು ರಾಯಭಾಗದ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಸಹಾಯಕ ಪ್ರಾಧ್ಯಾಪಕರಾದ ಪ್ರೊ. ವಿಠ್ಠಲ ಕುರಂದವಾಡ ಅಭಿಪ್ರಾಯಪಟ್ಟರು.

ಅವರು ಗುರುವಾರದಂದು ಕಲ್ಲೋಳಿಯ ಶ್ರೀ ರಾಮಲಿಂಗೇಶ್ವರ ಶಿಕ್ಷಣ ಸಂಸ್ಥೆಯ ಪ್ರಥಮ ದರ್ಜೆ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನೆ ಘಟಕ ಹಾಗೂ ರಾಜ್ಯಶಾಸ್ತ್ರ ವಿಭಾಗಗಳ ಸಂಯುಕ್ತ ಆಶ್ರಯದಲ್ಲಿ ಹಮ್ಮಿಕೊಂಡಿದ್ದ “ವಿಶ್ವ ಮಾನವ ಹಕ್ಕುಗಳ ದಿನಾಚರಣೆ ಹಾಗೂ ಮತದಾನ ಜಾಗೃತಿ” ವರ್ಚುವಲ್ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿ, ಮತದಾನವು ಸರ್ವಶ್ರೇಷ್ಠ ದಾನವಾಗಿದ್ದು, ಅದರ ಮೂಲಕ ಸರ್ವತೋಮುಖ ಅಭಿವೃದ್ಧಿಗೆ ಕಾರಣವಾಗುವಂತಹ ವ್ಯಕ್ತಿಗಳನ್ನು ಆರಿಸುವ ಜವಾಬ್ದಾರಿ ಯುವ ಜನತೆಯದಾಗಿದೆ ಎಂದರು.

ಬೆಳಗಾವಿ ರಾಣಿ ಚನ್ನಮ್ಮ ವಿಶ್ವವಿದ್ಯಾಲಯದ ಎನ್.ಎಸ್.ಎಸ್. ಕೋಶದ ಸಂಯೋಜನಾ ಅಧಿಕಾರಿ ಪ್ರೊ. ಬಿ.ಎಸ್.ನಾವಿ ಮಾತನಾಡಿ, ಮಾನವ ಹಕ್ಕುಗಳು ಮಾನವೀಯತೆಯ ಪ್ರತಿನಿಧಿಗಳಾಗಿವೆ. ಮಾನವೀಯ ಪ್ರಪಂಚದ ನಿರ್ಮಾಣದಲ್ಲಿ ಪ್ರತಿಯೊಬ್ಬರೂ ಭಾಗಿಯಾಗಬೇಕೆಂದು ಹೇಳಿದರು.

ಪ್ರೊ. ಎಸ್.ಎಮ್.ಐಹೊಳೆ ಪ್ರಾಸ್ತಾವಿಕವಾಗಿ ಮಾತನಾಡಿ, ಮನುಷ್ಯನಿಗೆ ಕನಿಷ್ಠ ಅಗತ್ಯತೆಗಳು ಸಿಗಬೇಕು, ಅವರ ಹಕ್ಕುಗಳಿಗೆ ಗೌರವ ಸಿಗಬೇಕು ಎಂಬ ಉದ್ದೇಶದಿಂದ ಪ್ರತಿವರ್ಷ ಡಿಸೆಂಬರ್‌ 10 ಅನ್ನು ವಿಶ್ವ ಮಾನವ ಹಕ್ಕುಗಳ ದಿನವನ್ನಾಗಿ ಜಗತ್ತಿನೆಲ್ಲೆಡೆ ಆಚರಿಸಲಾಗುತ್ತದೆ. ಈ ದಿನವನ್ನು 1948 ರಿಂದ ಆಚರಿಸಿಕೊಂಡು ಬರಲಾಗುತ್ತಿದೆ. ಇದೇ ದಿನದಂದು ವಿಶ್ವಸಂಸ್ಥೆಯ ಸಾಮಾನ್ಯ ಸಭೆಯು ವಿಶ್ವ ಮಾನವ ಹಕ್ಕುಗಳ ಘೋಷಣೆಯನ್ನು ಅಂಗೀಕರಿಸಿತು. ಇದರ ನೆನಪಿಗಾಗಿ ಈ ದಿನವನ್ನು ಮಾನವ ಹಕ್ಕುಗಳ ದಿನಾಚರಣೆಯನ್ನಾಗಿ ಆಚರಿಸಲಾಗುತ್ತದೆ ಎಂದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಪ್ರೊ. ಡಿ.ಎಸ್.ಹುಗ್ಗಿ ಮಾತನಾಡಿ, ವ್ಯಕ್ತಿಯ ಆಂತರಿಕ ಪರಿವರ್ತನೆಯಿಂದಲೇ ಮಾನವ ಹಕ್ಕುಗಳ ಸಂರಕ್ಷಣೆ ಸಾಧ್ಯವೆಂದು ನುಡಿದರು.

ಎನ್.ಎಸ್.ಎಸ್. ಕಾರ್ಯಕ್ರಮಾಧಿಕಾರಿ ಪ್ರೊ. ಶಂಕರ ನಿಂಗನೂರ ನಿರೂಪಿಸಿದರು. ಪ್ರೊ. ಚಂದ್ರಶೇಖರ ಲಕ್ಷೆಟ್ಟಿ ವಂದಿಸಿದರು.


Spread the love

About inmudalgi

Check Also

19ನೇ ಶಿವಾನುಭವ ಗೋಷ್ಠಿ, ‘ಶುದ್ಧ ಕಾಯಕದಿಂದ ಜೀವನದಲ್ಲಿ ಸಂತೃಪ್ತಿ’

Spread the loveಮೂಡಲಗಿ: ‘ಪ್ರಾಮಾಣಿಕತೆ ಮತ್ತು ಶುದ್ಧ ಕಾಯಕದಿಂದ ಜೀವನದಲ್ಲಿ ಆನಂದ ಮತ್ತು ಸಂತೃಪ್ತಿ ದೊರೆಯುತ್ತದೆ” ಎಂದು ಅರಭಾವಿ ಮಠದ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ